ಹಿಮಾಚಲ ಪ್ರದೇಶ| ಮೇಘಸ್ಫೋಟದಲ್ಲಿ ಇಡೀ ಗ್ರಾಮ ಸರ್ವನಾಶ; ಕೇವಲ ಒಂದು ಮನೆ ಪಾರು
PC ; NDTV
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಡೆದ ಮೇಘ ಸ್ಫೋಟದಲ್ಲಿ ಇಡೀ ಗ್ರಾಮ ಸರ್ವನಾಶವಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಈ ದುರಂತದಲ್ಲಿ ಕೇವಲ ಒಂದು ಮನೆ ಪಾರಾಗಿದ್ದು, ಇದು ಮೇಘ ಸ್ಫೋಟದ ತೀವ್ರತೆಯನ್ನು ಸೂಚಿಸುತ್ತಿದೆ ಎಂದು ndtv.com ವರದಿ ಮಾಡಿದೆ.
ಸಮೇಜ್ ಗ್ರಾಮದ ನಿವಾಸಿಯಾದ ಅನಿತಾ ದೇವಿ ಎಂಬವರು ಬುಧವಾರ ರಾತ್ರಿಯ ದುರಂತವನ್ನು ಹೀಗೆ ಮೆಲುಕು ಹಾಕುತ್ತಾರೆ: “ನಾನು ಹಾಗೂ ನನ್ನ ಕುಟುಂಬವು ನಿದ್ರೆಗೆ ಜಾರಿದ್ದಾಗ ದೊಡ್ಡ ಶಬ್ದವೊಂದು ನಮ್ಮ ಮನೆಯನ್ನು ಅಲ್ಲಾಡಿಸಿತು. ನಾವು ಹೊರಗಡೆ ನೋಡಿದಾಗ, ಇಡೀ ಗ್ರಾಮ ಕೊಚ್ಚಿಕೊಂಡು ಹೋಗಿತ್ತು. ನಾವು ಗ್ರಾಮದ ಭಗವತಿ ಕಾಲಿ ಮಾತಾ ದೇವಾಲಯಕ್ಕೆ ಓಡಿ ಹೋಗಿ, ಅಲ್ಲಿಯೇ ಇಡೀ ರಾತ್ರಿ ಕಳೆದೆವು” ಎಂದು ನಡುಗುವ ಧ್ವನಿಯಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
“ಈ ಸರ್ವನಾಶದಲ್ಲಿ ಕೇವಲ ನನ್ನ ಮನೆ ಮಾತ್ರ ಪಾರಾಗಿದ್ದರೂ, ಉಳಿದೆಲ್ಲವೂ ನನ್ನ ಕಣ್ಣ ಮುಂದೆಯೇ ಕೊಚ್ಚಿಕೊಂಡು ಹೋಯಿತು. ನಾನೀಗ ಯಾರ ಜೊತೆ ಉಳಿಯಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ” ಎಂದು ಅವರು ಭಾವುಕರಾಗುತ್ತಾರೆ.
ಇನ್ನೊಂದು ಮನಕಲಕುವ ಕತೆಯಲ್ಲಿ ಸಮೇಜ್ ಗ್ರಾಮದ ಹಿರಿಯ ನಿವಾಸಿ ಬಕ್ಷಿ ರಾಮ್ ತಮ್ಮ ಸ್ವಂತ ನೋವನ್ನು ಕಣ್ಣಲ್ಲಿ ನೀರು ತುಂಬಿಕೊಂಡು ಹೀಗೆ ಹಂಚಿಕೊಳ್ಳುತ್ತಾರೆ: “ನನ್ನ ಕುಟುಂಬದ 14-15 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ನನಗೆ ಈ ಮಾಹಿತಿ ರಾತ್ರಿ 2 ಗಂಟೆಗೆ ದೊರೆಯಿತು ಹಾಗೂ ನಾನಾಗ ರಾಮ್ಪುರ್ ನಲ್ಲಿದ್ದೆ. ಹೀಗಾಗಿ ನಾನು ಬದುಕುಳಿದೆ. ನಾನು ಮುಂಜಾನೆ ನಾಲ್ಕು ಗಂಟೆಗೆ ಗ್ರಾಮಕ್ಕೆ ಬಂದಾಗ, ಎಲ್ಲವೂ ನಾಶವಾಗಿತ್ತು. ನಾನು ನನ್ನ ಪ್ರೀತಿಪಾತ್ರರಲ್ಲಿ ಯಾರಾದರೂ ಬದುಕುಳಿದಿರಬಹುದು ಎಂಬ ನಿರೀಕ್ಷೆಯಲ್ಲಿ ಅವರಿಗಾಗಿ ಹುಡುಕುತ್ತಿದ್ದೇನೆ” ಎನ್ನುತ್ತಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಶನಿವಾರದವರೆಗೆ ಒಟ್ಟು 53 ಮಂದಿ ನಾಪತ್ತೆಯಾಗಿದ್ದು, ಈವರೆಗೆ ಆರು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಘ ಸ್ಫೋಟದೊಂದಿಗೆ ದಿಢೀರ್ ಪ್ರವಾಹವು ನುಗ್ಗಿದ್ದರಿಂದ ಹಿಮಾಚಲ ಪ್ರದೇಶದ ಕುಲ್ಲು, ಮಂಡಿ ಹಾಗೂ ಶಿಮ್ಲಾ ಪ್ರಾಂತ್ಯಗಳಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಹೇಳಲಾಗಿದೆ.
ಮೇಘ ಸ್ಫೋಟದಲ್ಲಿ ಅರವತ್ತಕ್ಕೂ ಹೆಚ್ಚು ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಹಲವಾರು ಗ್ರಾಮಗಳು ಪ್ರವಾಹದಿಂದಾಗಿ ತೀವ್ರ ಸ್ವರೂಪದಲ್ಲಿ ಹಾನಿಗೀಡಾಗಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಶೇಷ ಕಾರ್ಯದರ್ಶಿ ಡಿ.ಸಿ.ರಾಣಾ ತಿಳಿಸಿದ್ದಾರೆ.
ಮೇಘ ಸ್ಫೋಟ ಹಾಗೂ ಅದರ ಬೆನ್ನಿಗೇ ಸಂಭವಿಸಿದ ದಿಢೀರ್ ಪ್ರವಾಹದಿಂದ ಹಾನಿಗೊಳಗಾಗಿರುವ ರಾಮ್ ಪುರ್ ಗ್ರಾಮ ಹಾಗೂ ರಾಮ್ ಪುರ್-ಸಮೇಜ್ ಪ್ರಾಂತ್ಯಗಳನ್ನು ಸಂಪರ್ಕಿಸುವ ಹಾನಿಗೀಡಾಗಿರುವ ರಸ್ತೆಯನ್ನು ಪುನರ್ ನಿರ್ಮಾಣ ಮಾಡುವ ಕೆಲಸ ಪ್ರಗತಿಯಲ್ಲಿದೆ.