ಸ್ಥಳೀಯ ಭಾಷೆಗಳಿಗೆ ಹಿಂದಿ ಸ್ಪರ್ಧೆ ಒಡ್ಡುವುದಿಲ್ಲ, ಅಧಿಕೃತ ಭಾಷೆಯನ್ನು ವಿರೋಧವಿಲ್ಲದೆ ಒಪ್ಪಬೇಕು: ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಹೊಸದಿಲ್ಲಿ: ನಿಧಾನವಾದರೂ ಯಾವುದೇ ರೀತಿಯ ವಿರೋಧವಿಲ್ಲದೆ ಅಧಿಕೃತ ಭಾಷೆಯನ್ನು ಒಪ್ಪಿಕೊಳ್ಳಬೇಕು ಎಂದು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಧಿಕೃತ ಭಾಷೆಯ ಸ್ವೀಕಾರವು ಕಾನೂನುಗಳು ಅಥವಾ ಸುತ್ತೋಲೆಗಳಿಂದ ಸಾಧ್ಯವಾಗುವುದಲ್ಲ, ಬದಲಿಗೆ ಸದ್ಭಾವನೆ, ಸ್ಫೂರ್ತಿ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸಂಸತ್ತಿನ ಅಧಿಕೃತ ಭಾಷೆಯ ಸಮಿತಿಯ 38ನೇ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಭಾರತೀಯ ಸಂವಿಧಾನದಲ್ಲಿ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಅಧಿಕೃತ ಭಾಷೆಗಳಲ್ಲಿ ಒಂದಾಗಿ ಪಟ್ಟಿಮಾಡಲಾಗಿದೆ ಎನ್ನುವುದು ಗಮನಿಸಬೇಕಾದ ಅಂಶ ಎಂದು ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಯಾವುದೇ ಸ್ಥಳೀಯ ಭಾಷೆಗಳಿಗೆ ಹಿಂದಿ ಸ್ಪರ್ಧೆ ಒಡ್ಡುವುದಿಲ್ಲ ಎಂದು ಹೇಳಿದ ಶಾ, ಎಲ್ಲಾ ಭಾರತೀಯ ಭಾಷೆಗಳ ಪ್ರಚಾರದ ಮೂಲಕ ಭಾರತವನ್ನು ಸಶಕ್ತಗೊಳಿಸಬಹುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಗಾಗಿ ಐದು ವಚನಗಳನ್ನು ಉತ್ತೇಜಿಸಿದರು. 2022 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, 2047 ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾವು ಐದು ಪ್ರತಿಜ್ಞೆಗಳೊಂದಿಗೆ ಮುಂದುವರಿಯಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಅವರು ಪಟ್ಟಿ ಮಾಡಿದ ಐದು ಪ್ರತಿಜ್ಞೆಗಳಲ್ಲಿ ವಸಾಹತುಶಾಹಿಯ ಎಲ್ಲಾ ಕುರುಹುಗಳನ್ನು ಅಳಿಸಿಹಾಕುವುದು ಕೂಡಾ ಒಂದು. ವಸಾಹತುಶಾಹಿಯ ಕುರುಹುಗಳನ್ನು ಅಳಿಸುವ ಮತ್ತು ನಮ್ಮ ಪರಂಪರೆಯನ್ನು ಗೌರವಿಸುವ ಪ್ರತಿಜ್ಞೆಯನ್ನು ಪೂರೈಸಲು, ಎಲ್ಲಾ ಭಾರತೀಯ ಭಾಷೆಗಳು ಮತ್ತು ಅಧಿಕೃತ ಭಾಷೆಗಳು ತಮ್ಮ ಶಕ್ತಿಯನ್ನು ತೋರಿಸಬೇಕು ಎಂದು ಅಮಿತ್ ಶಾ ಹೇಳಿದರು.
ಸಂಸತ್ತಿನಲ್ಲಿ ಪ್ರಧಾನಿ ಒಂದೇ ಒಂದು ಇಂಗ್ಲಿಷ್ ಭಾಷಣ ಮಾಡಿಲ್ಲ, ಅನೇಕ ಸಚಿವರು ಭಾರತೀಯ ಭಾಷೆಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಭಾರತೀಯ ಭಾಷೆಗಳಿಗೆ ಗೌರವ ಮತ್ತು ಅಧಿಕೃತ ಭಾಷೆಯ ಸ್ವೀಕಾರವಿಲ್ಲದೆ ನಮ್ಮ ಪರಂಪರೆ ಪೂರ್ಣವಾಗುವುದಿಲ್ಲ ಹಾಗೂ ಪರಂಪರೆಯ ಬಗ್ಗೆ ನಮಗೆ ಇರುವ ಗೌರವ ಕೂಡಾ ಪೂರ್ಣವಾಗುವುದಿಲ್ಲ ಎಂದು ಶಾ ಹೇಳಿದರು.
ಸ್ಥಳೀಯ ಭಾಷೆಗಳಿಗೆ ಗೌರವ ನೀಡಿದಾಗ ಮಾತ್ರ ಅಧಿಕೃತ ಭಾಷೆಗೆ ಮನ್ನಣೆ ದೊರೆಯುತ್ತದೆ ಎಂದು ಹೇಳಿದ ಅವರು, 10 ಭಾಷೆಗಳಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕೋರ್ಸ್ಗಳು ನಂತರ ಎಲ್ಲಾ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ ಎಂದು ಹೇಳಿದರು.