ಸಾಕ್ಷರತೆಯಲ್ಲಿ ಮುಂದಿರುವ ಕೇರಳದಲ್ಲಿ ಹೆಚ್ಚುತ್ತಿರುವ ʼಮನೆ ಹೆರಿಗೆʼ ಪ್ರಕರಣಗಳು
ತಾಯಿ-ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಪ್ರಯತ್ನಕ್ಕೆ ಹಿನ್ನಡೆ ; ಅಸಹಾಯಕವಾದ ಆರೋಗ್ಯ ಇಲಾಖೆ!

Photo | thehindu
ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ(WHO) 'ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ' ಎಂಬ ಅಭಿಯಾನವನ್ನು ಪ್ರಾರಂಭಿಸಿತು. ಜನರಿಗೆ ಆರೋಗ್ಯ ಸೇವೆಗಳನ್ನು ದೊರಕಿಸಿಕೊಟ್ಟು ತಾಯಿ ಮತ್ತು ನವಜಾತ ಶಿಶುವಿನ ಮರಣ ತಡೆ, ಮಹಿಳೆಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅಭಿಯಾನದ ಗುರಿಯಾಗಿದೆ. ಆದರೆ, ಇದಕ್ಕೆ ದೊಡ್ಡ ಸವಾಲು ಎಂಬಂತೆ ಕೇರಳದಲ್ಲಿ ಜನರು ಮನೆ ಹೆರಿಗೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ತಾಯಿ- ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ.
►ಮನೆಯಲ್ಲಿ ಹೆರಿಗೆ ವೇಳೆ ಪ್ರಾಣ ಕಳೆದುಕೊಂಡ ಅಸ್ಮಾ:
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಸ್ಮಾ(35) ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಹೆರಿಗೆ ವೇಳೆ ತೀವ್ರವಾದ ಪ್ರಸವಾ ನಂತರದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅಸ್ಮಾ ಅವರ ಕುಟುಂಬ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಬದಲು ಮನೆಯಲ್ಲೇ ಹೆರಿಗೆ ಮಾಡಿಸಿದ್ದರಿಂದ ಈ ಅನಾಹುತ ಸಂಭವಿಸಿತ್ತು. ಘಟನೆಯು ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಸಾಕ್ಷರತೆಯಲ್ಲಿ ಮುಂದಿರುವ ಕೇರಳದಲ್ಲಿ ಏನಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದರು. ಅವೈಜ್ಞಾನಿಕ ಮತ್ತು ಅಸುರಕ್ಷಿತ ಮನೆ ಹೆರಿಗೆಗಳನ್ನು ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡುವಂತೆ ಕೇರಳದ ವೈದ್ಯರ ಸಂಘ ಸರಕಾರಕ್ಕೆ ಒತ್ತಾಯಿಸಿತು.
►ಆರೋಗ್ಯ ಸಚಿವರು ಹೇಳಿದ್ದೇನು?
ಘಟನೆಯ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮಹಿಳೆ ಗರ್ಭಿಣಿಯಾಗಿದ್ದ ವೇಳೆ ಕುಟುಂಬವು ಉದ್ದೇಶಪೂರ್ವಕವಾಗಿ ಆರೋಗ್ಯ ಕಾರ್ಯಕರ್ತರಿಗೆ ಮನೆಗೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಅಸ್ಮಾ ಮೃತಪಟ್ಟ ಪ್ರಕರಣವನ್ನು ʼನರಹತ್ಯೆʼ ಎಂದು ಪರಿಗಣಿಸಲಾಗುವುದು. ಆಕೆಯ ಪತಿಯನ್ನು ವಶಕ್ಕೆ ಪಡೆಯಲಾಗಿದೆ. ಮನೆ ಹೆರಿಗೆಗಳನ್ನು ಪ್ರಚಾರ ಮಾಡುವ ಜನರ ವಿರುದ್ಧವೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು.
►ಅಸಹಾಯಕವಾಯಿತೇ ಆರೋಗ್ಯ ಇಲಾಖೆ?
ಕೇರಳದಲ್ಲಿ ಪ್ರತಿ ವರ್ಷ ಸುಮಾರು 3 ಲಕ್ಷ ಹೆರಿಗೆಗಳು ನಡೆಯುತ್ತವೆ. ಅವುಗಳಲ್ಲಿ ಹೆಚ್ಚಿನವು ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದರೂ, ಸುಮಾರು 500 ಹೆರಿಗೆಗಳು ಇನ್ನೂ ಮನೆಯಲ್ಲಿಯೇ ನಡೆಯುತ್ತಿವೆ. ಅವೈಜ್ಞಾನಿಕ ಚಿಕಿತ್ಸಾ ವಿಧಾನಗಳಲ್ಲಿ ನಂಬಿಕೆ ಅಥವಾ ಕೆಲವು ಗುಂಪುಗಳು ಅಥವಾ ವ್ಯಕ್ತಿಗಳು ಹರಡುವ ತಪ್ಪು ಮಾಹಿತಿಯಿಂದ ಈ ರೀತಿಯಾಗುತ್ತಿದ್ದರೂ ಈ ಘಟನೆಯನ್ನು ತಡೆಯಲು ಆರೋಗ್ಯ ಇಲಾಖೆ ಏನೇನೂ ಮಾಡಿಲ್ಲ ಎನ್ನುವುದು ಕಂಡು ಬರುತ್ತಿದೆ. ತಾಯಿಯ ಮತ್ತು ನವಜಾತ ಶಿಶುಗಳ ಆರೋಗ್ಯವನ್ನು ಸುಧಾರಿಸಲು ತಳಮಟ್ಟದ ಆರೋಗ್ಯ ಸುಧಾರಣಾ ಕ್ರಮಗಳ ಹೊರತಾಗಿಯೂ ಒಂದು ವಿಭಾಗದ ಜನರು ಆಸ್ಪತ್ರೆಯಲ್ಲಿ ಹೆರಿಗೆಗಿಂತಲೂ ಮನೆ ಹೆರಿಗೆಯನ್ನೇ ಆರಿಸಿಕೊಳ್ಳುತ್ತಿದ್ದಾರೆ. ಅವರು ಇದರಿಂದಾಗುವ ಅಪಾಯಗಳನ್ನು ಎದುರಿಸಲು ಸಿದ್ದರಿದ್ದಾರೆ ಎನ್ನುವುದು ವಿಪರ್ಯಾಸ!
ʼಈ ಹಿಂದೆ ಬುಡಕಟ್ಟು ಸಮುದಾಯದಲ್ಲಿ ಮನೆ ಹೆರಿಗೆಗಳು ಹೆಚ್ಚಾಗಿ ಕಂಡು ಬರುತ್ತಿದ್ದವು. ಅವರಿಗೆ ತುರ್ತು ಆರೋಗ್ಯ ಸೇವೆಗಳು ಸಿಗುತ್ತಿರಲಿಲ್ಲ. ಆದರೆ ಈಗ ಬೇಕಂತಲೇ ಮನೆ ಹೆರಿಗೆ ಮಾಡಿಸಿಕೊಳ್ಳಲಾಗುತ್ತಿದೆ. ಅದರ ಬಗ್ಗೆ ನಾವು ಅಸಹಾಯಕರಾಗಿದ್ದೇವೆʼ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ಹೇಳಿದರು.
►ಧಾರ್ಮಿಕ ಕಾರಣ ಮುಂದಿಟ್ಟು ಮನೆ ಹೆರಿಗೆ!
ಕೆಲವೊಂದು ಪ್ರಕರಣಗಳಲ್ಲಿ ಗರ್ಭಿಣಿಯರು ಪ್ರಸವಪೂರ್ವ ತಪಾಸಣೆಗೆ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ, ಹೆರಿಗೆಗಾಗಿ ಆಸ್ಪತ್ರೆಗೆ ಬರಲು ಅವರು ನಿರಾಕರಿಸುತ್ತಾರೆ. ಬಹಳಷ್ಟು ಮನೆ ಹೆರಿಗೆಗಳು ನಡೆಯುತ್ತವೆ. ಹೆರಿಗೆ ವೇಳೆ ಸಹಾಯಕ್ಕಾಗಿ ಶುಶ್ರೂಷಕಿಯರನ್ನು ಮನೆಗೆ ಕರೆಸಿಕೊಳ್ಳಲಾಗುತ್ತದೆ. ಧಾರ್ಮಿಕ ಕಾರಣ ಮುಂದಿಟ್ಟು ಕೆಲವರು ಹೆರಿಗೆಗೆ ಮನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನೈಸರ್ಗಿಕವಾಗಿ ನಡೆಯುವ ಹೆರಿಗೆಯನ್ನು ತಪ್ಪಿಸಲು ಆಸ್ಪತ್ರೆಗಳು ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದೆ ಎಂದೂ ಕೆಲ ಕುಟುಂಬಗಳು ನಂಬುತ್ತವೆ.
ʼಇತ್ತೀಚೆಗೆ ʼಪ್ರಕೃತಿ ಚಿಕಿತ್ಸೆʼ ಮತ್ತು ʼಅಕ್ಯುಪಂಕ್ಚರ್ʼ ಚಿಕಿತ್ಸಕರು ಮನೆಯಲ್ಲಿ ನೋವು ರಹಿತ ನೈಸರ್ಗಿಕ ಹೆರಿಗೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಮನೆ ಹೆರಿಗೆಯನ್ನು ಆಯ್ಕೆ ಮಾಡಿಕೊಳ್ಳುವವರಲ್ಲಿ ಹೆಚ್ಚಿನವರು ವಿದ್ಯಾವಂತರಾಗಿದ್ದಾರೆʼ ಎಂದು ತಾನೂರ್ ಸಿಎಚ್ಸಿಯ ವೈದ್ಯಾಧಿಕಾರಿ ಕೆ.ಪ್ರತಿಭಾ ಹೇಳಿದರು.
ಮನೆ ಹೆರಿಗೆಯನ್ನು ನಿಯಂತ್ರಿಸಲು ರಾಜ್ಯವು ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಾ ಕಳೆದ ವರ್ಷ ಹೈಕೋರ್ಟ್ ಮೊರೆ ಹೋಗಿದ್ದರು.
2022ರಲ್ಲಿ ನಾನು ಮಲಪ್ಪುರಂನ ತಾನಲೂರ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗ ಈ ಪ್ರದೇಶದಲ್ಲಿ 16 ಮನೆ ಹೆರಿಗೆಗಳು ನಡೆದಿವೆ. ಮನೆ ಹೆರಿಗೆಗೆ ಮಾರ್ಗಸೂಚಿಗಳನ್ನು ಕೋರಿ ನಾನು ನ್ಯಾಯಾಲಯದ ಮೊರೆ ಹೋದೆ. ಏಕೆಂದರೆ ಮನೆ ಹೆರಿಗೆಯ ಸಂಭವನೀಯ ತೊಡಕುಗಳು ಅಥವಾ ತಾಯಿ, ನವಜಾತ ಶಿಶುಗಳ ಮರಣಕ್ಕೆ ವೈದ್ಯಕೀಯ ಅಧಿಕಾರಿಗಳೇ ಜವಾಬ್ದಾರರು. ಇದು ಮಕ್ಕಳ ಹಕ್ಕುಗಳ ಪ್ರಶ್ನೆ ಕೂಡ ಹೌದು. ಏಕೆಂದರೆ ಪ್ರತಿ ನವಜಾತ ಶಿಶು ತಪಾಸಣೆ, ಕಡ್ಡಾಯ ಲಸಿಕೆ ಸೇರಿದಂತೆ ಉತ್ತಮ ಆರೈಕೆಗೆ ಅರ್ಹವಾಗಿದೆ ಎಂದು ಡಾ. ಪ್ರತಿಭಾ ಹೇಳಿದರು. ಸಧ್ಯ ಪ್ರಕರಣ ಹೈಕೋರ್ಟ್ನಲ್ಲಿದ್ದು, ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.
►ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ಮನೆ ಹೆರಿಗೆ!
ಕೇರಳದಲ್ಲಿ ಕಳೆದ ವರ್ಷ 500ಕ್ಕೂ ಅಧಿಕ ಮನೆ ಹೆರಿಗೆಗಳು ನಡೆದಿವೆ. ಮಲಪ್ಪುರಂ ಜಿಲ್ಲೆಯೊಂದರಲ್ಲೇ ಸುಮಾರು 300 ಮನೆ ಹೆರಿಗೆಗಳು ವರದಿಯಾಗಿವೆ.
ʼಮನೆ ಹೆರಿಗೆಗೆ ಸಂಬಂಧಿಸಿ ಇತ್ತೀಚಿನ ಕೆಲ ಬೆಳವಣಿಗೆ ಕೂಡ ಆತಂಕಕಾರಿಯಾಗಿದೆ. ಮನೆಯಲ್ಲಿ ಹೆರಿಗೆ ಆಯ್ಕೆ ಮಾಡಿದ ಸುಮಾರು 1,200 ಕುಟುಂಬಗಳಿಗೆ ಶ್ಲಾಘಿಸಲು ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದು ಉತ್ತಮ ಬೆಳವಣಿಗೆಯಲ್ಲʼ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.
ಸಾಮಾನ್ಯವಾಗಿ ಮಹಿಳೆಗೆ ಗರ್ಭಾವಸ್ಥೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇದು ಹೆರಿಗೆಯ ಸಮಯದಲ್ಲಿ ತಾಯಿಯ ಪ್ರಾಣಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ. ಹೃದಯ ಸ್ತಂಭನ, ಅನಿಯಂತ್ರಿತ ರಕ್ತಸ್ರಾವಕ್ಕೆ ಕಾರಣವಾಗಬಹುದು. ಕೆಲವೊಂದು ಪ್ರಕರಣಗಳಲ್ಲಿ ತಾಯಿ ಬದುಕುಳಿದರೂ ಗಂಭೀರವಾದ ದೀರ್ಘಕಾಲಿಕ ಕಾಯಿಲೆಗೆ ಗುರಿಯಾಗುವ ಸಾಧ್ಯತೆ ಇದೆ. ನವಜಾತ ಶಿಶುಗಳು ಕೂಡ ತೊಂದರೆಗೆ ಒಳಗಾಗುವ ಸಾಧ್ಯತೆಗಳಿವೆ. ಆದ್ದರಿಂದ ಆರೋಗ್ಯ ಇಲಾಖೆಯು ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ.
ಸೌಜನ್ಯ: TheHindu