ಹಾಂಕಾಂಗ್: `ದೇಶಪ್ರೇಮಿಗಳಿಗೆ ಸೀಮಿತ' ಚುನಾವಣೆಯಲ್ಲಿ ಕನಿಷ್ಠ ಮತದಾನ
Photo: NDTV
ಹಾಂಕಾಂಗ್: ಹಾಂಕಾಂಗ್ ನಲ್ಲಿ ರವಿವಾರ ಜಿಲ್ಲಾ ಸಮಿತಿಗೆ ನಡೆದ ಪ್ರಪ್ರಥಮ `ದೇಶಪ್ರೇಮಿಗಳಿಗೆ ಮಾತ್ರ' ಸೀಮಿತವಾದ ಮತದಾನದಲ್ಲಿ ಕೇವಲ 27.5%ದಷ್ಟು ಮತದಾನವಾಗಿದೆ ಎಂದು ಸರಕಾರ ಸೋಮವಾರ ಘೋಷಿಸಿದೆ.
2019ರಲ್ಲಿ ಪ್ರಜಾಪ್ರಭುತ್ವಕ್ಕೆ ಆಗ್ರಹಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ನಡೆದಿದ್ದ ಚುನಾವಣೆಯಲ್ಲಿ 71%ದಷ್ಟು ದಾಖಲೆ ಪ್ರಮಾಣದ ಮತದಾನವಾಗಿದ್ದು ಇದರಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿದ್ದ ವಿಪಕ್ಷಗಳ ಒಕ್ಕೂಟ ಭರ್ಜರಿ ಗೆಲುವು ದಾಖಲಿಸಿತ್ತು.
ಆದರೆ ಬಳಿಕ ವಿರೋಧಪಕ್ಷಗಳು ಹಾಗೂ ಭಿನ್ನಮತೀಯರನ್ನು ಹತ್ತಿಕ್ಕಲು ಚೀನಾ ಸರಕಾರ ಹಾಂಕಾಂಗ್ ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿತ್ತು(ಹಾಂಕಾಂಗ್ ಚೀನಾದ ವಿಶೇಷ ಆಡಳಿತ ವಲಯವಾಗಿದೆ) ಮತ್ತು ವಿಪಕ್ಷದ ಹಲವು ಮುಖಂಡರನ್ನು ಬಂಧಿಸಿತ್ತು. ಮೇ ತಿಂಗಳಿನಲ್ಲಿ ಜಾರಿಗೊಳಿಸಿದ ಹೊಸ ಕಾನೂನಿನ ಪ್ರಕಾರ ಜಿಲ್ಲಾ ಸಮಿತಿಗಳಿಗೆ ನೇರವಾಗಿ ಚುನಾವಣೆಯ ಮೂಲಕ ಆಯ್ಕೆಗೊಳ್ಳುವ ಸ್ಥಾನಗಳನ್ನು 462ರಿಂದ 88ಕ್ಕೆ ಇಳಿಸಲಾಗಿದ್ದು ಉಳಿದ 382 ಸ್ಥಾನಗಳಿಗೆ ಸದಸ್ಯರನ್ನು ನಾಮನಿರ್ದೇಶನ ಗೊಳಿಸುವ ಅಧಿಕಾರವನ್ನು ನಗರದ ಮುಖಂಡರು, ಚೀನಾ ಸರಕಾರಕ್ಕೆ ನಿಷ್ಟರಾಗಿರುವವರು ಹಾಗೂ ಗ್ರಾಮೀಣ ಜಮೀನ್ದಾರರಿಗೆ ನೀಡಲಾಗಿದೆ. ಅಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸುವ 88 ಅಭ್ಯರ್ಥಿಗಳ ಹೆಸರನ್ನೂ ಸರಕಾರ ನೇಮಿಸಿದ ಸಮಿತಿ ಅನುಮೋದಿಸಿದ ಬಳಿಕವಷ್ಟೇ ಸ್ಪರ್ಧೆಗೆ ಅವಕಾಶ ನೀಡಲಾಗಿದ್ದು ಇದು ಪ್ರಜಾಪ್ರಭುತ್ವ ಪರ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶವನ್ನೇ ಮೊಟಕುಗೊಳಿಸಿದೆ. ಈ ಮಧ್ಯೆ, ಚುನಾವಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ `ಲೀಗ್ ಆಫ್ ಸೋಶಿಯಲ್ ಡೆಮೊಕ್ರಾಟ್ಸ್' ಪಕ್ಷದ ಹಲವು ಸದಸ್ಯರನ್ನು ರವಿವಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.