ಕುಟುಂಬ ನಿರಾಕರಿಸಿದರೆ ರೋಗಿಯನ್ನು ಐಸಿಯುವಿಗೆ ಆಸ್ಪತ್ರೆಗಳು ದಾಖಲಿಸುವಂತಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸಲು ಅವರು ಅಥವಾ ಅವರ ಸಂಬಂಧಿಕರು ನಿರಾಕರಿಸಿದರೆ ಅಂತಹ ರೋಗಿಗಳನ್ನು ಐಸಿಯುಗೆ ಆಸ್ಪತ್ರೆಗಳು ದಾಖಲಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಇತ್ತೀಚಿನ ಐಸಿಯು ದಾಖಲಾತಿ ಕುರಿತ ಮಾರ್ಗಸೂಚಿಗಳಲ್ಲಿ ಹೇಳಿದೆ. ಒಟ್ಟು 24 ತಜ್ಞರ ಸಹಕಾರದೊಂದಿಗೆ ಈ ಮಾರ್ಗಸೂಚಿಗಳನ್ನು ಹೊರತರಲಾಗಿದೆ.
ಒಂದು ರೋಗಕ್ಕೆ ಇನ್ನು ಯಾವುದೇ ಚಿಕಿತ್ಸೆ ಲಭ್ಯವಿಲ್ಲದೇ ಇರುವಾಗ ಅಥವಾ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸುವುದರಿಂದ ಯಾವುದೇ ಪರಿಣಾಮ ಅಥವಾ ಪ್ರಗತಿಯಾಗದು ಅಥವಾ ಆ ಚಿಕಿತ್ಸೆ ನೀಡಿದರೂ ಅವರು ಬದುಕುಳಿಯುವ ಸಾಧ್ಯತೆಯಿಲ್ಲವೆಂದಾದರೆ ಅಂತಹ ರೋಗಿಗಳನ್ನು ಐಸಿಯುವಿನಲ್ಲಿ ಇರಿಸುವುದು ಅನಗತ್ಯವಾಗುವುದು ಎಂದು ಮಾರ್ಗಸೂಚಿ ತಿಳಿಸಿದೆ.
ಸಾಂಕ್ರಾಮಿಕ ಅಥವಾ ವಿಪತ್ತಿನ ಸನ್ನಿವೇಶದಲ್ಲಿ ಸಂಪನ್ಮೂಲಗಳು ಸೀಮಿತವಾಗಿರುವಾಗ ಕಡಿಮೆ ಆದ್ಯತೆ ಮಾನದಂಡವನ್ನು ರೋಗಿಯನ್ನು ಐಸಿಯುವಿನಲ್ಲಿ ಇರಿಸಲು ನಿರ್ಧರಿಸುವಾಗ ತೆಗೆದುಕೊಳ್ಳಬೇಕೆಂದು ಮಾರ್ಗಸೂಚಿ ತಿಳಿಸುತ್ತದೆ.
ಅಂಗಾಂಗ ವೈಫಲ್ಯ, ಆರೋಗ್ಯ ಹದಗೆಡುವ ಸಾಧ್ಯತೆಯಿರುವ ಮಾನದಂಡಗಳನ್ನು ಅನುಸರಿಸಿ ಐಸಿಯುವಿಗೆ ರೋಗಿಯನ್ನು ದಾಖಲಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ.
ಉಸಿರಾಟದ ಬೆಂಬಲ ಅಗತ್ಯವಿರುವ ರೋಗಿಗಳು, ಸತತ ನಿಗಾ ಇರಿಸಬೇಕಾದ ರೋಗಿಗಳನ್ನು ಐಸಿಯುವಿಗೆ ಸೇರಿಸಲು ಪರಿಗಣಿಸಬೇಕು. ಶಸ್ತ್ರಕ್ರಿಯೆಯ ವೇಳೆ ಉಸಿರಾಟದ ಸಮಸ್ಯೆ ಅಥವಾ ಹೃದಯ ಸಂಬಂಧಿ ಸಮಸ್ಯೆ ಎದುರಿಸಿದವರು ಅಥವಾ ದೊಡ್ಡ ಶಸ್ತ್ರಕ್ರಿಯೆಗೆ ಒಳಗಾದವರನ್ನು ಐಸಿಯುವಿಗೆ ದಾಖಲಿಸಬಹುದು.
ಮಾರ್ಗಸೂಚಿಗಳ ಪ್ರಕಾರ ಐಸಿಯು ದಾಖಲಾತಿಗೆ ಕಾದಿರುವ ರೋಗಿಗಳ ರಕ್ತದೊತ್ತಡ, ನಾಡಿ ಬಡಿತ, ಉಸಿರಾಟ ಪ್ರಮಾಣ, ಹೃದಯ ಬಡಿತ, ಆಕ್ಸಿಜನ್ ಸ್ಯಾಚುರೇಶನ್, ಮೂತ್ರದ ಪ್ರಮಾಣ, ನ್ಯುರಾಲಾಜಿಕಲ್ ಸ್ಥೀತಿ ಮುಂತಾದವುಗಳ ಮೇಲೆ ನಿಗಾ ಇಡಬೇಕಿದೆ.