ʼಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲʼ: ದಿಲ್ಲಿ ಹೈಕೋರ್ಟ್
Photo | PTI
ಹೊಸದಿಲ್ಲಿ: ಅತ್ಯಾಚಾರ, ಆಸಿಡ್ ದಾಳಿ ಮತ್ತು ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಯಾವುದೇ ಆಸ್ಪತ್ರೆಗಳು ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
16 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆಯೇ ನಡೆಸಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರ ಪೀಠ, ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್ ಗಳು ಅತ್ಯಾಚಾರ ಸಂತ್ರಸ್ತರಿಗೆ ಉಚಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಬೇಕು, ಇದು ಕರ್ತವ್ಯವಾಗಿದೆ ಎಂದು ಹೇಳಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಚಿಕಿತ್ಸೆಗೆ ನಿರಾಕರಿಸುವುದು ಅಪರಾಧವಾಗಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೆ ಈ ಕುರಿತು ದಂಡ ವಿಧಿಸಬಹುದು. ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ಉಚಿತವಾಗಿ ವೈದ್ಯಕೀಯ ಪರೀಕ್ಷೆಗಳು, ಔಷಧಿಗಳು, ದೀರ್ಘಾವಧಿಯ ವೈದ್ಯಕೀಯ ಆರೈಕೆಗಳನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ʼಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿಯ ಸಂತ್ರಸ್ತರಿಗೆ ಹೊರರೋಗಿ ಅಥವಾ ಒಳರೋಗಿಯಾಗಿ ಉಚಿತ ಚಿಕಿತ್ಸೆ ಲಭ್ಯವಿರಲಿದೆ ಎಂದು ದಿಲ್ಲಿಯ ಎಲ್ಲಾ ಆಸ್ಪತ್ರೆಗಳಲ್ಲಿ ಬೋರ್ಡ್ ಹಾಕಬೇಕುʼ ಎಂದು ನ್ಯಾಯಾಲಯ ಇದೇ ವೇಳೆ ಹೇಳಿದೆ.