ರಾಜಸ್ಥಾನ | ಹಾರಾಟಕ್ಕೂ ಮುನ್ನ ಪರೀಕ್ಷಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿಸಿಗಾಳಿ ಬಲೂನಿನ ಹಗ್ಗ ತುಂಡು; ಕೆಳಗೆ ಬಿದ್ದು ವ್ಯಕ್ತಿ ಮೃತ್ಯು

Photo : NDTV
ಜೈಪುರ: ರಾಜಸ್ಥಾನದ ಬರಾನ್ ನಲ್ಲಿ ಬಿಸಿಗಾಳಿ ಬಲೂನಿನ ಹಗ್ಗ ತುಂಡಾಗಿ, ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಬರಾನ್ ಜಿಲ್ಲೆಯ 35ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರ ಭಾಗವಾಗಿ ಬಿಸಿಗಾಳಿಯ ಬಲೂನಿನಲ್ಲಿ ಹಾರಾಡುವ ಕಾರ್ಯಕ್ರಮವೂ ಇತ್ತು.
ಬಿಸಿಗಾಳಿಯ ಬಲೂನಿನಲ್ಲಿ ಹಾರಾಡಾಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ಮುನ್ನ ಕೋಟಾದ ನಿವಾಸಿ ವಾಸುದೇವ್ ಖತ್ರಿ ಎಂಬವರು ಅಭ್ಯಾಸ ನಡೆಸುತ್ತಿದ್ದ ವೇಳೆ ಬಲೂನಿನ ಹಗ್ಗ ತುಂಡಾಗಿ ಈ ಘಟನೆ ಸಂಭವಿಸಿದೆ.
ಬಲೂನಿಗೆ ಬಿಸಿಗಾಳಿ ತುಂಬಿಸುತ್ತಿದ್ದಂತೆ ಒಮ್ಮೆಲೇ ಗಾಳಿ ಬೀಸಿದ್ದರಿಂದ ಬಲೂನ್ ಮೇಲಕ್ಕೆ ಚಲಿಸಿದೆ ಎನ್ನಲಾಗಿದೆ. ಗಾಳಿಯ ತೀವ್ರತೆಗೆ ಹಗ್ಗ ಹಿಡಿದ್ದ ವಾಸುದೇವ್ ಅವರನ್ನೂ ಬಲೂನ್ ಮೇಲಕ್ಕೆ ಎಳೆದೊಯ್ಡಿದೆ. ಪರಿಣಾಮ ಗಾಳಿಯಲ್ಲಿ 100 ಅಡಿ ಎತ್ತರಕ್ಕೆ ಎಳೆದುಕೊಂಡು ಹೋಗುತ್ತಿದ್ದಂತೆ ಹಗ್ಗ ತುಂಡಾಗಿ ವಾಸುದೇವ್ ನೆಲಕ್ಕೆ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡಿದ್ದ ವಾಸುದೇವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಗಿದೆ. ಈ ವೇಳೆ ಪರೀಕ್ಷಿಸಿದ ವೈದ್ಯರು ವಾಸುದೇವ್ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.