ಅಲಿಗಢ ವಿವಿ ಊಟದ ಮೆನುವಿನಲ್ಲಿ 'ಬೀಫ್ ಬಿರಿಯಾನಿ' : ವಿವಾದ

Photo | PTI
ಹೊಸದಿಲ್ಲಿ : ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನದ ಭೋಜನಕ್ಕೆ 'ಬೀಫ್ ಬಿರಿಯಾನಿ' ನೀಡಲಾಗುವುದು ಎಂಬ ನೋಟಿಸ್ ವೈರಲ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಭುಗಿಲೆದ್ದಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸರ್ ಶಾ ಸುಲೈಮಾನ್ ಹಾಲ್ ನಲ್ಲಿ ರವಿವಾರ ಮಧ್ಯಾಹ್ನದ ಊಟದ ಭೋಜನಕ್ಕೆ ಚಿಕನ್ ಬಿರಿಯಾನಿಯ ಬದಲು 'ಬೀಫ್ ಬಿರಿಯಾನಿ' ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ.
ವಿವಾದ ಭುಗಿಲೆದ್ದ ಬೆನ್ನಲ್ಲೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಪ್ರತಿಕ್ರಿಯಿಸಿದ್ದು, ಇದು ಟೈಪಿಂಗ್ ನಿಂದಾದ ಲೋಪವಾಗಿದೆ. ಇದು ಉದ್ದೇಶಪೂರ್ವಕವಲ್ಲದ ತಪ್ಪಾಗಿದ್ದು, ಈ ಕುರಿತು ಸಂಬಂಧ ಪಟ್ಟವರಿಗೆ ನೋಟಿಸ್ ನೀಡಲಾಗಿದೆ. ಆ ನೋಟಿಸ್ ನಲ್ಲಿ ಯಾವುದೇ ಅಧಿಕೃತ ಸಹಿಗಳಿಲ್ಲದ ಕಾರಣ, ಅದರ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದರಿಂದ ಅದನ್ನು ತಕ್ಷಣವೇ ಹಿಂಪಡೆದಿದ್ದೇವೆ. ಈ ಕುರಿತು ಜವಾಬ್ದಾರರಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, ಎಎಂಯು ಹಳೆಯ ವಿದ್ಯಾರ್ಥಿ ನಿಶಿತ್ ಶರ್ಮಾ, ಸರ್ ಶಾ ಸುಲೈಮಾನ್ ಹಾಲ್ ನಲ್ಲಿ ಚಿಕನ್ ಬಿರಿಯಾನಿಯ ಬದಲಿಗೆ ಬೀಫ್ ಬಿರಿಯಾನಿ ನೀಡಲಾಗುವುದು ಎಂದು ಹೇಳುವ ಸೂಚನಾ ಫಲಕ ಹಾಕಲಾಗಿದೆ. ವಿವಿಯ ಆಹಾರ ಸಮಿತಿಯ ಸದಸ್ಯರು ಇದಕ್ಕೆ ಜವಾಬ್ದಾರರು. ಇಂತಹ ಕ್ರಮಗಳು, ಆಡಳಿತ ಮಂಡಳಿಯು ವಿದ್ಯಾರ್ಥಿಗಳ ದುಷ್ಕೃತ್ಯವನ್ನು ಮುಚ್ಚಿಹಾಕುತ್ತಿದೆ ಮತ್ತು ಮೂಲಭೂತವಾದಿಗಳನ್ನು ಬೆಂಬಲಿಸುತ್ತದೆ ಎಂಬುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.