ಉತ್ತಮ ಬದುಕಿನ ನಿರೀಕ್ಷೆಯಲ್ಲಿದ್ದ ಭಾರತೀಯರನ್ನು ಏಜೆಂಟರು ಸೈಬರ್ ವಂಚಕರನ್ನಾಗಿ ಬದಲಿಸಿದ್ದು ಹೇಗೆ?
ಕೋಟಿಗಟ್ಟಲೆ ವಂಚಿಸಿದವನಿಗೆ 10.25 ಲಕ್ಷ ರೂ. ನಗದು, ಐಫೋನ್ ಉಡುಗೊರೆ ನೀಡಿದ್ದ ಸೈಬರ್ ಕಳ್ಳರು!
ಹೊಸದಿಲ್ಲಿ: ಹೈದರಾಬಾದ್ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ದೀನಬಂಧು ಸಾಹು ತಿಂಗಳಾಂತ್ಯದ ವೆಚ್ಚವನ್ನು ಸರಿದೂಗಿಸಲಾಗದೆ, ತನ್ನ ತವರಾದ ಒಡಿಶಾದ ಗಂಜಂ ಜಿಲ್ಲೆಯ ಇತರ ಹಲವಾರು ಯುವಕರಂತೆ ತಾನೂ ಕೂಡಾ ವಿದೇಶಕ್ಕೆ ವಲಸೆ ಹೋಗಿ, ಸಾಕಷ್ಟು ಹಣವನ್ನು ಗಳಿಸಿ, ನಂತರ ತನ್ನ ಗ್ರಾಮಕ್ಕೆ ಮರಳಿ ತಾನೇ ಏನಾದರೂ ಸ್ವತಂತ್ರವಾಗಿ ಉದ್ಯೋಗ ಮಾಡುವ ಕನಸು ಹೊಂದಿದ್ದರು.
ಆತನ ಮಹತ್ವಾಕಾಂಕ್ಷೆಯು ಆತನನ್ನು ಕಾಂಬೋಡಿಯಾಗೆ ಕರೆದೊಯ್ಯಿತು. ತನ್ನ ಕನಸು ಸಾಕಾರಗೊಳ್ಳುವುದು ತುಂಬಾ ದೂರವಿದೆ ಎಂದು ಅರಿವಾಗುವುದರೊಳಗೆ ಆತ ತನ್ನ ಪತ್ನಿಯ ಆಭರಣಗಳು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದ. ತನ್ನ ಕುಟುಂಬಕ್ಕೆ ನೆರವು ನೀಡಲು ಈಗ ಸಾಹು ಸ್ಥಳೀಯ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪ್ಯೂಟರ್ ಆಪರೇಟರ್ ಆಗಿದ್ದವರು ಈಗ ಪೆಟ್ರೋಲ್ ಹಾಕುತ್ತಿದ್ದಾರೆ.
ಅಂದಾಜು 5,000 ಭಾರತೀಯರು ಕಾಂಬೋಡಿಯಾದಲ್ಲಿ ಸಿಲುಕಿಕೊಂಡು, ಬಲವಂತವಾಗಿ ಸೈಬರ್ ಅಪರಾಧದಲ್ಲಿ ತೊಡಗಿರುವ ಪ್ರಕರಣವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚಿಸಿದ ನಂತರ, ಬಿಸ್ವನಾಥ್ ಪುರ್ ಗ್ರಾಮದ ನಿವಾಸಿ ಸಾಹು ತಮ್ಮ ತವರಿಗೆ ಮರಳಿದ್ದಾರೆ. ಆತ ಕಾಂಬೋಡಿಯಾದಲ್ಲಿ ಸುಮಾರು ಒಂದೂವರೆ ತಿಂಗಳಿದ್ದು, ನಂತರ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ಮರಳಿದ್ದರು.
ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ 5,000ಕ್ಕೂ ಹೆಚ್ಚು ಭಾರತೀಯರ ಪರಿಸ್ಥಿತಿ ಕುರಿತು The Indian Express ದಿನ ಪತ್ರಿಕೆ ವರದಿ ಮಾಡಿದ ನಂತರ, ಕಾಂಬೋಡಿಯಾ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಲಾಗಿದ್ದು, ಈವರೆಗೆ 250 ಭಾರತೀಯರನ್ನು ರಕ್ಷಿಸಿ, ಭಾರತಕ್ಕೆ ಮರಳಿ ಕರೆ ತರಲಾಗಿದೆ ಎಂದು ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತ್ತು.
ಸಾಹು ಅಲ್ಲದೆ, ತವರಿಗೆ ಮರಳಿ ಬಂದಿರುವ ಇಬ್ಬರು ಕರ್ನಾಟಕ ನಿವಾಸಿಗಳೊಂದಿಗೂ The Indian Express ಮಾತನಾಡಿತ್ತು. ಅವರೆಲ್ಲ ತವರಿನಲ್ಲಿನ ಅವಕಾಶದ ಕೊರತೆ, ತಮ್ಮ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡ ಏಜೆಂಟ್ ಗಳು, ಜಗತ್ತಿನಾದ್ಯಂತ ಉದ್ಯೋಗದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ, ಉದ್ಯೋಗದಾತರು ತಮ್ಮ ಪಾಸ್ ಪೋರ್ಟ್ ಹಾಗೂ ವೀಸಾಗಳನ್ನು ಕಿತ್ತಿಟ್ಟುಕೊಂಡು, ಅಕ್ಷರಶಃ ಒತ್ತೆಯಾಳುಗಳನ್ನಾಗಿಸಿಕೊಂಡ ಒಂದೇ ಬಗೆಯ ಕತೆಯನ್ನು ಹಂಚಿಕೊಂಡರು. ಒಂದು ಪ್ರಕರಣದಲ್ಲಿ, ಈ ಪರಿಸ್ಥಿತಿಯ ಕುರಿತು ಧ್ವನಿ ಎತ್ತಿದ ಕರ್ನಾಟಕದ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಆತನಿಗೆ ವಿದ್ಯುದಾಘಾತವನ್ನೂ ನೀಡಲಾಗಿತ್ತು.
“ಪದವೀಧರನಾದ ನಂತರ, ಗುರುಗ್ರಾಮ, ಬೆಂಗಳೂರು ಹಾಗೂ ಹೈದರಾಬಾದ್ ನಂಥ ನಗರಗಳಲ್ಲಿ ನಾನು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಾ, ತಿಂಗಳಿಗೆ ರೂ. 20,000-25,000 ಗಳಿಸುತ್ತಿದ್ದೆ. ನಾನು ವಾಸಿಸುವ ಸ್ಥಳದಿಂದ ಹಲವಾರು ಯುವಕರು ಸೌದಿ ಹಾಗೂ ಇನ್ನಿತರ ಮಧ್ಯಪ್ರಾಚ್ಯ ದೇಶಗಳು ಹಾಗೂ ಈಶಾನ್ಯ ಏಶ್ಯಾ ದೇಶಗಳಿಗೆ ವಲಸೆ ಹೋಗಿರುವುದರಿಂದ, ನಾನೂ ಕೂಡಾ ನನ್ನ ಅದೃಷ್ಟವನ್ನು ಪರೀಕ್ಷಿಸಲು ಯತ್ನಿಸಿದೆ” ಎಂದು ಹೇಳುತ್ತಾರೆ ಸಾಹು.
ಸಾಂಪ್ರದಾಯಿಕವಾಗಿ ಮದ್ಯ ಮಾರಾಟ ಮಾಡುವ ಸುಂಡಿ ಜಾತಿಗೆ ಸೇರಿರುವ ಸಾಹು, ನನ್ನ ಹಿರಿಯ ಸಹೋದರ ಈ ಅಭ್ಯಾಸವನ್ನು ಸ್ಥಗಿತಗೊಳಿಸಿ, ದೊಡ್ಡ ನಗರಗಳಲ್ಲಿ ಉದ್ಯೋಗ ಮಾಡಲು ಬಯಸಿದ್ದ ಎಂದೂ ಸಾಹು ಹೇಳುತ್ತಾರೆ.
“ಹೈದರಾಬಾದ್ ನಲ್ಲಿ ಉದ್ಯೋಗ ಮಾಡುವಾಗ, ಜನರು ವಿದೇಶಗಳಿಗೆ ಉದ್ಯೋಗಕ್ಕೆ ತೆರಳಲು ವಡೋದರದಲ್ಲಿರುವ ಕನ್ಸಲ್ಟೆನ್ಸಿ ಸಂಸ್ಥೆಯೊಂದು ನೆರವು ನೀಡುತ್ತದೆ ಎಂದು ನನ್ನ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬ ತಿಳಿಸಿದ. ಅವರು ನನ್ನನ್ನು ವಾಟ್ಸ್ ಆ್ಯಪ್ ಗುಂಪಿಗೆ ಸೇರಿಸಿಕೊಂಡರು ಹಾಗೂ ಉದ್ಯೋಗಾವಕಾಶ ದೊರೆಯುವವರೆಗೂ ಕಾಯುವಂತೆ ಸೂಚಿಸಿದರು. ಮೂರ್ನಾಲ್ಕು ತಿಂಗಳ ನಂತರ, ವಿಯೆಟ್ನಾಂನಲ್ಲಿ ಉದ್ಯೋಗಾವಕಾಶವಿದೆ ಎಂದು ಹೇಳಿ ನನ್ನ ಸಂದರ್ಶನ ತೆಗೆದುಕೊಂಡರು. ಆ ಸಂದರ್ಶನದಲ್ಲಿ ನಾನು ಉತ್ತೀರ್ಣನಾಗಿದ್ದೆ” ಎಂದು ಆತ ಸ್ಮರಿಸುತ್ತಾನೆ.
ವೀಸಾ ಶುಲ್ಕವಾಗಿ ರೂ. 1.5 ಲಕ್ಷವನ್ನು ಜಮೆ ಮಾಡುವಂತೆ ಸಾಹುಗೆ ಸೂಚಿಸಲಾಯಿತು ಹಾಗೂ ಆತ ಅದಕ್ಕಾಗಿ ತನ್ನ ಪತ್ನಿಯ ಆಭರಣಗಳನ್ನು ಗಿರವಿ ಇಟ್ಟರು.
ಜುಲೈ 25, 2023ರಂದು ಕೋಲ್ಕತ್ತಾದಿಂದ ವಿಯೆಟ್ನಾಂನ ಹೊ ಚಿ ಮಿನ್ಹ್ ಗೆ ಆತ ವಿಮಾನದ ಮೂಲಕ ಪ್ರಯಾಣ ಬೆಳೆಸಿದರು. ಅಲ್ಲಿಂದ ಅವರ ಬವಣೆ ಪ್ರಾರಂಭಗೊಂಡಿತು.
ವಿಮಾನದಿಂದ ಇಳಿದ ನಂತರ ಸಾಹು, ತನ್ನನ್ನು ಕರೆದೊಯ್ಯಬೇಕಿದ್ದ ವ್ಯಕ್ತಿಯನ್ನು ಸಂಪರ್ಕಿಸಿದರು. ಆರೇಳು ಗಂಟೆಗಳ ರಸ್ತೆ ಪ್ರಯಾಣದ ನಂತರ, ಸಾಹುಗೆ ತಾನು ಕಾಂಬೋಡಿಯಾದ ಗಡಿಯಲ್ಲಿರುವುದು ಅರಿವಾಯಿತು!
“ನಾನು ಭಾರತದಲ್ಲಿರುವ ನನ್ನ ಏಜೆಂಟ್ ಗೆ ಕರೆ ಮಾಡಿದೆ. ಅದಕ್ಕೆ ಆತ, ವಿಯೆಟ್ನಾಂನಲ್ಲಿ ನನಗೆ ಮೊದಲಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಕಂಪನಿಯು ನಂತರ ನನ್ನನ್ನು ನಿರಾಕರಿಸಿದೆ ಎಂದು ತಿಳಿಸಿದ. ನಾನು ನಿನಗಾಗಿ ಕಾಂಬೋಡಿಯಾದಲ್ಲಿ ಉದ್ಯೋಗವನ್ನು ವ್ಯವಸ್ಥೆಗೊಳಿಸಿದ್ದು, ನಾನೀಗಾಗಲೇ ಹಣ ಪಾವತಿ ಮಾಡಿರುವುದರಿಂದ ಆ ಉದ್ಯೋಗವನ್ನು ಒಪ್ಪಿಕೊಳ್ಳಲೇಬೇಕು ಎಂದು ಸೂಚಿಸಿದ” ಎಂದು ಸಾಹು ಕರಾಳ ಘಟನೆಯನ್ನು ನೆನಪಿಸಿಕೊಂಡರು.
“ನಾನು ಕಾಂಬೋಡಿಯಾ ತಲುಪಿದ ನಂತರ, ಮತ್ತೊಬ್ಬ ಏಜೆಂಟ್ ತೆಲಂಗಾಣ, ತಮಿಳುನಾಡು ಹಾಗೂ ಪಂಜಾಬ್ ಗೆ ಸೇರಿದ ಮೂವರು ಭಾರತೀಯರ ಬಳಿಗೆ ನನ್ನನ್ನು ಕರೆದೊಯ್ದ. ಅವರು ನನಗೆ ತಿಂಗಳಿಗೆ ರೂ. 900 ಡಾಲರ್ ವೇತನದ ಭರವಸೆ ನೀಡಿದ್ದರೂ, ಪ್ರತಿ ತಿಂಗಳು 700 ಡಾಲರ್ ವೇತನ ನೀಡುವುದಾಗಿ ಆಫರ್ ನೀಡಿದ್ದರಿಂದ ನಾನು ಹೆದರಿಕೊಂಡೆ ಹಾಗೂ ಭಾರತಕ್ಕೆ ಮರಳಲು ಬಯಸಿದೆ. ನನ್ನನ್ನು ಥಾಯ್ಲೆಂಡ್ ಗಡಿಗೆ ಸನಿಹವಿರುವ ಪೋಯ್ ಪೆಟ್ ಗೆ ಕರೆದೊಯ್ಯಲಾಯಿತು. ಒತ್ತಾಯಪೂರ್ವಕವಾಗಿ ನಾನಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಬೇಕಾಯಿತು” ಎನ್ನುತ್ತಾರೆ ಸಾಹು.
“ಮೊದಲ ಹತ್ತು ದಿನಗಳ ಕಾಲ ನನಗೆ ಫೇಸ್ ಬುಕ್, ವಾಟ್ಸ್ ಆ್ಯಪ್ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆ ನಕಲಿ ಖಾತೆ ತೆರೆಯುವುದು ಎಂಬ ಕುರಿತು ತರಬೇತಿ ನೀಡಲಾಯಿತು. ನನಗೆ ಆ ಕೆಲಸದ ಸ್ವರೂಪವು ಅನನುಕೂಲಕರವೆಸಿದ್ದರಿಂದ, ನಾನು ಮರಳಿ ಭಾರತದಲ್ಲಿನ ನನ್ನ ಏಜೆಂಟ್ ಅನ್ನು ಸಂಪರ್ಕಿಸಿದೆ. ಅದಕ್ಕಾತ, ನನಗೆ ಏನು ಮಾಡಲು ಸೂಚಿಸಲಾಗುತ್ತದೊ ಆ ಕೆಲಸವನ್ನು ಮಾಡು. ಆ ಉದ್ಯೋಗದಲ್ಲಿ ಉತ್ತಮ ಪ್ರೋತ್ಸಾಹಕ ಭತ್ಯೆಗಳಿವೆ ಎಂದು ಸೂಚಿಸಿದ” ಎಂದು ಅವರು ತಮ್ಮ ಕೆಲಸದ ದಿನಗಳನ್ನು ನೆನಪಿಸಿದರು.
“ಆ ಉದ್ಯೋಗವು ನಕಲಿ ಸ್ವವಿವರಗಳೊಂದಿಗೆ ಇತರರೊಂದಿಗೆ ಸಂವಾದ ನಡೆಸಿ, ಅವರ ವಿಶ್ವಾಸವನ್ನು ಗೆಲ್ಲುವುದಾಗಿತ್ತು. ನಾವು ವಂಚಕರಾಗಿದ್ದೆವು. ನಾವು ಪರಸ್ಪರ ಸ್ನೇಹಿತರಾದ ನಂತರ, ನಾವು ಜನರನ್ನು ವಂಚಕ ವ್ಯವಹಾರಗಳಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸುತ್ತಿದ್ದೆವು. ಒಮ್ಮೆ ಅವರು ಹಣವನ್ನು ಜಮೆ ಮಾಡಿದ ಕೂಡಲೇ ಅವರ ಖಾತೆಯನ್ನು ನಿರ್ಬಂಧಿಸುತ್ತಿದ್ದೆವು. ನನಗೆ ಫಿಲಿಪ್ಪೈನ್ಸ್ ಜನರನ್ನು ಮರಳು ಮಾಡಲು ಸೂಚಿಸಲಾಗಿತ್ತು” ಎಂದು ಅವರು ವಿವರಿಸುತ್ತಾನೆ.
ಉತ್ತಮ ಹಣಕಾಸು ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಆತ ಗುರಿಯಾಗಿಸಿಕೊಳ್ಳಬೇಕಿತ್ತು. ಅವರು ಚಲಾಯಿಸುವ ಕಾರು, ಧರಿಸುವ ವಾಚು, ಬಟ್ಟೆ ಹಾಗೂ ಬಳಸುವ ಗ್ಯಾಜೆಟ್ ಗಳವರೆಗೆ ಅಳೆದು, ಅವರ ಆರ್ಥಿಕ ಹಿನ್ನೆಲೆಯನ್ನು ಗ್ರಹಿಸಬೇಕಿತ್ತು.
“ನಾವು ಅವರೊಂದಿಗೆ ಸಂಪರ್ಕ ಸಾಧಿಸಲು ಅನುವಾದದ ತಂತ್ರಾಂಶವನ್ನು ಬಳಸುತ್ತಿದ್ದೆವು. ಚೀನಾ ಮೂಲದ ಕಂಪೆನಿಗಾಗಿ ಭಾರತ, ಇಂಡೋನೇಶ್ಯಾ ಹಾಗೂ ನೇಪಾಳದ ಸಾವಿರಾರು ಮಂದಿ ಯುವಕರು ಕೆಲಸ ಮಾಡುತ್ತಿದ್ದಾರೆ” ಎಂದು ಮಾಹಿತಿ ನೀಡಿದರು ಸಾಹು.
ನಾನು ಇನ್ನು ಈ ಕೆಲಸ ಮಾಡುವುದಿಲ್ಲ ಎಂದು ಆತ ಅಕ್ಷರಶಃ ನಿರಾಕರಿಸಿದಾಗ, ಆತನನ್ನು ಸಿಸಿಟಿವಿ ಕಣ್ಗಾವಲಿರುವ ಕೋಣೆಯೊಂದರಲ್ಲಿ ಕೂಡಿ ಹಾಕಲಾಯಿತು ಹಾಗೂ ಅಲ್ಲಿಂದ ತಪ್ಪಿಸಿಕೊಳ್ಳದಂತೆ ಸೂಚಿಸಲಾಯಿತು. “ನಾನು ಅಲ್ಲಿ 32 ದಿನಗಳ ಕಾಲ ಕೆಲಸ ಮಾಡಿದರೂ, ಯಾವುದೇ ವೇತನ ದೊರೆಯಲಿಲ್ಲ” ಎಂದರು ದೀನಬಂಧು ಸಾಹು.
ಈ ಸುದ್ದಿ ತಿಳಿಯುತ್ತಿದ್ದಂತೆಯೆ ಸಾಹು ಕುಟುಂಬವು ಸ್ಥಳೀಯ ಬಿಜೆಪಿ ನಾಯಕನನ್ನು ಮುಖತಃ ಭೇಟಿ ಮಾಡಿತು. ಅವರು ಈ ವಿಷಯವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಗಮನಕ್ಕೆ ತಂದರು. ಈ ವಿಷಯವನ್ನು ಪ್ರಧಾನ್ ಅವರು ತಮ್ಮ ಸಂಪುಟ ಸಹೋದ್ಯೋಗಿ ಎಸ್.ಜೈಶಂಕರ್ ಅವರ ಗಮನಕ್ಕೆ ತರುತ್ತಿದ್ದಂತೆಯೆ, ಸಾಹು ಮರಳಿ ಭಾರತಕ್ಕೆ ಹಿಂದಿರುಗುವುದು ಸಾಧ್ಯವಾಯಿತು.
ಅದು ಜೈಲಲ್ಲದೆ ಮತ್ತೇನಲ್ಲ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ 28 ವರ್ಷದ ಅಶೋಕ್ ಎಂಬವರು ಬಿ.ಕಾಂ ಪದವೀಧರನಾಗಿದ್ದ ಹೊರತಾಗಿಯೂ ಉದ್ಯೋಗ ಪಡೆಯಲು ಒದ್ದಾಡುತ್ತಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬ್ಯಾಂಕಾಕ್ ಮೂಲಕ ಕಾಂಬೋಡಿಯಾಗೆ ತೆರಳಿದ್ದ ಅವರು, ನವೆಂಬರ್ ತಿಂಗಳಲ್ಲಿ ತವರಿಗೆ ಮರಳುವಲ್ಲಿ ಯಶಸ್ವಿಯಾಗಿದ್ದರು. “ನನಗೆ ಡಾಟಾ ಎಂಟ್ರಿ ಉದ್ಯೋಗಕ್ಕೆ ಪ್ರತಿ ತಿಂಗಳು ರೂ. 80,000-ರೂ. 1,00,000 ವೇತನದ ಆಮಂತ್ರಣವನ್ನು ನೀಡಲಾಗಿತ್ತು. ಈ ಆಮಂತ್ರಣ ನೀಡಿದ ಏಜೆಂಟ್ ನೆರೆಯ ಜಿಲ್ಲೆಯಲ್ಲಿ ವಾಸಿಸುತ್ತಿದ್ದ” ಎಂದು ಅಶೋಕ್ ಹೇಳುತ್ತಾರೆ.
“ಆತ ನನ್ನೊಂದಿಗೆ ಅಲ್ಲಿಗೆ ಬಂದಿದ್ದ ಹಾಗೂ ಮೊದಲಿಗೆ ಮಲಗುವ ಕೋಣೆಗೆ ಸ್ಥಳಾಂತರವಾಗುವುದಕ್ಕೂ ಮುನ್ನ ನಾನು ಆತನ ರೂಮಿನಲ್ಲಿಯೇ ಉಳಿದುಕೊಂಡಿದ್ದೆ. ಅಲ್ಲಿ ನನ್ನ ಪಾಸ್ ಪೋರ್ಟ್ ಹಾಗೂ ವೀಸಾವನ್ನು ಕಿತ್ತುಕೊಳ್ಳಲಾಯಿತು ಹಾಗೂ ಒಂದೆರಡು ವಾರದಲ್ಲಿ ನಾನು ಅಲ್ಲಿ ಸೈಬರ್ ವಂಚನೆ ನಡೆಸಬೇಕು ಎಂದು ಮನವರಿಕೆಯಾಯಿತು. ಅದಕ್ಕೆ ಆಕ್ಷೇಪಿಸಿದಾಗ, ನನ್ನ ವ್ಯವಸ್ಥಾಪಕನು ನನ್ನನ್ನು ಅಲ್ಲಿಂದ ಬಿಡುಗಡೆ ಮಾಡಲು ರೂ. 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅದು ಜೈಲಲ್ಲದೆ ಮತ್ತೇನೂ ಆಗಿರಲಿಲ್ಲ” ಎಂದು ಸ್ಮರಿಸುತ್ತಾರೆ ಅಶೋಕ್.
ಬೇರೆಲ್ಲಿಗೂ ಹೋಗಲು ಅವಕಾಶವಿಲ್ಲದಿದ್ದರಿಂದ ಅಶೋಕ್ ನಂಥ ಹಲವರು ತಮ್ಮ ಪರಿಸ್ಥಿತಿಯ ಕುರಿತು ಆತ್ಮನಿರೀಕ್ಷೆಯಲ್ಲಿ ತೊಡಗಿದ್ದರು. ಮಹಿಳೆಯಂತೆ ಸೋಗು ಹಾಕಿ ಡೇಟಿಂಗ್ ಆ್ಯಪ್ ಗಳಲ್ಲಿ ಆತ ತನ್ನ ಗುರಿಗಳಿಗಾಗಿ ಹುಡುಕಬೇಕಿತ್ತು.
ವಾಟ್ಸ್ ಆ್ಯಪ್ ಸಂವಾದಗಳ ಮೇಲೆ ತನ್ನ ಉದ್ಯೋಗದಾತರು ಕಣ್ಣಿಟ್ಟಿದ್ದಾರೆ ಎಂಬ ಅರಿವಿಲ್ಲದೆ ಒಂದು ದಿನ ಅಶೋಕ್ ತಾನು ನಂಬಿಕೆ ಬೆಳೆಸಿಕೊಂಡಿದ್ದ ವ್ಯಕ್ತಿಯೊಂದಿಗೆ ಡೇಟಿಂಗ್ ಆ್ಯಪ್ ನಲ್ಲಿ ತನ್ನ ಸ್ಥಿತಿಯನ್ನು ಬಹಿರಂಗಪಡಿಸಿದ್ದ. “ನನ್ನನ್ನು ಕತ್ತಲ ಕೋಣೆಯಲ್ಲಿ ಇಡಲಾಗಿತ್ತು. ಅವರು ನನ್ನ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ, ಕಡಿಮೆ ತೀವ್ರತೆಯ ವಿದ್ಯುದಾಘಾತ ನೀಡಿದ್ದರು. ನನ್ನ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆರು ದಿನಗಳ ಬಂಧನದ ನಂತರ, ಅವರು ನನಗೆ ಎರಡು ಬಾರಿ ಫೋನ್ ನೀಡಿದ್ದರು. ಆದರೆ, ಅದು ನನ್ನನ್ನು ಬಿಡುಗಡೆ ಮಾಡಲು ಕುಟುಂಬದಿಂದ ಹಣ ಕೇಳಲು ಮಾತ್ರ ಸೀಮಿತವಾಗಿತ್ತು. ಏನಾಗಿದೆ ಎಂದು ನನ್ನ ಕುಟುಂಬದವರಿಗೆ ಅರ್ಥವಾದ ನಂತರ, ಅವರು ಕರ್ನಾಟಕದಲ್ಲಿ ಪೊಲೀಸ್ ದೂರು ನೀಡಿದರು” ಎಂದು ಅಶೋಕ್ ತಮ್ಮ ಕಾಂಬೋಡಿಯಾದ ಅನುಭವಗಳನ್ನು ಬಿಚ್ಚಿಡುತ್ತಾರೆ.
ತನ್ನ ಸ್ನೇಹಿತ ಹಾಗೂ ನೆರೆಯವರಾದ ಮಂಜುನಾಥ್ ರವಿ ಅವರಿಗೂ ಸಂಕ್ಷಿಪ್ತ ಕರೆ ಮಾಡುವಲ್ಲಿ ಅಶೋಕ್ ಯಶಸ್ವಿಯಾಗಿದ್ದರು. “ಮೊದಲು ಅಶೋಕ್ ಹಾಗೂ ಕಾಂಬೋಡಿಯಾದ ಮಹಿಳೆಯೊಬ್ಬರು ನನಗೆ ಕರೆ ಮಾಡಿ, ಆತನನ್ನು ಬಿಡುಗಡೆ ಮಾಡಲು 13 ಲಕ್ಷ ರೂ. ಬೇಡಿಕೆ ಇಟ್ಟರು. ಅದನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡುವಂತೆ ಪೊಲೀಸರು ನನಗೆ ಸೂಚಿಸಿದರು. ಈ ನಡುವೆ, ಏಜೆಂಟ್ ವಿರುದ್ಧ ಎಫ್ಐಆರ್ ದಾಖಲಾಯಿತು” ಎಂದು ಹೇಳುವ ರವಿ, ಕಾಂಬೋಡಿಯಾದಲ್ಲಿದ್ದ ಏಜೆಂಟ್ ನನ್ನು ಸಂಪರ್ಕಿಸಿದ ಪೊಲೀಸರು, ತವರಿನಲ್ಲಿರುವ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಬೆದರಿಸಿದರು.
ಒತ್ತಡಕ್ಕೀಡಾದ ಏಜೆಂಟ್ ಅಶೋಕ್ ನನ್ನು ಬಿಡುಗಡೆಗೊಳಿಸಿದನಾದರೂ, ಮಾರ್ಗ ಮಧ್ಯೆ ಸಿಲುಕಿಕೊಳ್ಳಲಿ ಎಂದು ಆತನ ಸಾಮಗ್ರಿಗಳ ನಡುವೆ ಮಾದಕ ದ್ರವ್ಯಗಳನ್ನಿರಿಸಿದ್ದ. ಆದರೆ, ಅದೃಷ್ಟವಶಾತ್, ತಾನು ಅಲ್ಲಿಂದ ನಿರ್ಗಮಿಸುವುದಕ್ಕೂ ಮುನ್ನ, ಅಶೋಕ್ ತನ್ನ ಸಾಮಗ್ರಿಗಳನ್ನು ಅಲ್ಲೇ ಬಿಟ್ಟು ಬಂದಿದ್ದ.
ಚಿಕ್ಕಮಗಳೂರು ಜಿಲ್ಲೆಯ 21 ವರ್ಷದ ಐಟಿಐ (ಎಲೆಕ್ಟ್ರಾನಿಕ್ಸ್) ಪದವೀಧರ ಸ್ಟೀಫನ್ ಮೊಂತೇರಾ ಕೂಡಾ ತನ್ನ ಡೆಲಿವರಿ ಏಜೆಂಟ್ ಕೆಲಸವು ಹೆಚ್ಚು ಹಣವನ್ನು ಸಂಪಾದಿಸದೆ ಇದ್ದುದರಿಂದ ಕಾಂಬೋಡಿಯಾದಲ್ಲಿನ ಉದ್ಯೋಗಾವಕಾಶವನ್ನು ಒಪ್ಪಿಕೊಂಡಿದ್ದ. ಮಂಗಳೂರಿನ ಏಜೆಂಟ್ ಒಬ್ಬ ಆತನಿಗೆ ಪ್ರತಿ ತಿಂಗಳು ರೂ. 75,000 ವೇತನದ ಭರವಸೆಯನ್ನು ನೀಡಿದ್ದ. ಇದೂ ಕೂಡಾ ಡಾಟಾ ಎಂಟ್ರಿ ಆಪರೇಟರ್ ಉದ್ಯೋಗವಾಗಿತ್ತು.
ಹೊರಗಿನಿಂದ ಕ್ಯಾಸಿನೊ ಥರ ಕಾಣಿಸುತ್ತಿದ್ದ ಆ ಕಟ್ಟಡದ ಒಳಗೆ ನೂರಾರು ಅಲ್ಲ, ಸಾವಿರಾರು ವಂಚಕರು ಜಗತ್ತಿನಾದ್ಯಂತ ಜನರನ್ನು ವಂಚಿಸಲು ಹಗಲೂ ರಾತ್ರಿ ದುಡಿಯುತ್ತಿದ್ದರು ಎಂದು ಆತ ಬಣ್ಣಿಸುತ್ತಾನೆ.
“ನನ್ನ ಕೆಲಸವು ಯುವತಿಯರ ಭಾವಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಸ್ವವಿವರಗಳನ್ನು ಸೃಷ್ಟಿಸುವುದಾಗಿತ್ತು. ವಿದೇಶಿ ವ್ಯವಹಾರಗಳಲ್ಲಿ ಹೂಡಿಕೆ ಮಾಡುವಂತೆ ಧನಿಕ ಭಾರತೀಯರಿಗೆ ಆಮಿಷವೊಡ್ಡುವುದು ನನಗೆ ನೀಡಲಾಗಿದ್ದ ಗುರಿಯಾಗಿತ್ತು. ಇದರ ಮೊದಲ ಹಂತ, ದಿನದ 24 ಗಂಟೆಯೂ ಕಣ್ಗಾವಲಿರುವ ವಾಟ್ಸ್ ಆ್ಯಪ್ ಗುಂಪಿಗೆ ಕರೆ ತರುವುದಾಗಿತ್ತು” ಎಂದು ಆತ ಹೇಳುತ್ತಾನೆ.
ತನ್ನ ಗುರಿಗಳನ್ನು ತಲುಪಲು ವಿಫಲವಾದಾಗ, ಸ್ಟೀಫನ್ ವೇತನವನ್ನು ಕಡಿತಗೊಳಿಸಿ ತಿಂಗಳೊಂದಕ್ಕೆ ಕೇವಲ ರೂ. 25,000 ವೇತನ ನೀಡಲಾಗುತ್ತಿತ್ತು. ಬಹುತೇಕ ಮಂದಿ ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿಯವರೆಗೆ ಕೆಲಸ ಮಾಡುತ್ತಾರೆ ಎನ್ನುತ್ತಾನೆ ಸ್ಟೀಫನ್.
ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ಪ್ರೋತ್ಸಾಹಕ ಭತ್ಯೆಯನ್ನು ನೀಡಲಾಗುತ್ತಿತ್ತು ಎಂದು ಕುರಿತೂ ಆತ ಹೇಳುತ್ತಾನೆ. ಒಬ್ಬ ವ್ಯಕ್ತಿಗೆ ಕೋಟಿಗಟ್ಟಲೆ ವಂಚಿಸಿದ ಭಾರತೀಯನೊಬ್ಬನಿಗೆ ರೂ. 10.25 ಲಕ್ಷ ನಗದು ಹಾಗೂ ಆ್ಯಪಲ್ ಐಫೋನ್ ಪ್ರೊ ಮ್ಯಾಕ್ಸ್ ಅನ್ನು ಉಡುಗೊರೆಯಾಗಿ ನೀಡಲಾಗಿತ್ತು ಎಂದೂ ಆತ ಮಾಹಿತಿ ನೀಡುತ್ತಾನೆ.
ನಾವು ತವರಿಗೆ ಮರಳಲು ಅದೃಷ್ಟವಂತರಾಗಿದ್ದೆವು ಎಂದು ಅಶೋಕ್ ಹಾಗೂ ಸ್ಟೀಫನ್ ಇಬ್ಬರೂ ಹೇಳಿದರೂ, ಇನ್ನೂ ನೂರಾರು ಭಾರತೀಯರು ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲು ಮರೆಯುವುದಿಲ್ಲ.
ಸೌಜನ್ಯ: indianexpress.com