ನಿತೀಶ್ ಕುಮಾರ್ ಅವರನ್ನು ‘ಪಲ್ಟುಮಾರ್’ ಎಂದು ವ್ಯಂಗ್ಯವಾಡಿದ ಪ್ರಶಾಂತ್ ಕಿಶೋರ್
ನಿತೀಶ್ ಕುಮಾರ್ ಜೊತೆ ಪ್ರಶಾಂತ್ ಕಿಶೋರ್ (File Photo: PTI)
ಹೊಸದಿಲ್ಲಿ: ಬಿಹಾರದಲ್ಲಿನ ಅಧಿಕಾರ ಬದಲಾವಣೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ‘ಪಲ್ಟುಮಾರ್’ ಎಂದು ವ್ಯಂಗ್ಯವಾಡಿದ್ದು, ನಿಷ್ಠೆ ಬದಲಿಸುವ ಅವರ ರಾಜಕಾರಣದ ಭಾಗವಾಗಿ ಹೋಗಿದೆ ಎಂದು ಹೇಳಿದ್ದಾರೆ. ಮುಂದಿನ ಬಿಹಾರ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳಿಗೆ ಬೆಂಬಲಿಸುವ ಸಾಧ್ಯತೆ ಇರುವ ಜನ್ ಸೂರಜ್ ಸಂಘಟನೆಯ ನೇತೃತ್ವ ವಹಿಸಿರುವ ಪ್ರಶಾಂತ್ ಕಿಶೋರ್ ಬಿಜೆಪಿ ನಾಯಕರ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ್ದು, ಕೆಲ ದಿನಗಳ ಹಿಂದಷ್ಟೇ ನಿತೀಶ್ ಕುಮಾರ್ ರನ್ನು ಟೀಕಿಸುತ್ತಿದ್ದ ಅವರು, ಇದೀಗ ಸ್ವಾಗತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದಿಯಲ್ಲಿ ‘ಪಲ್ಟುಮಾರ್’ ಎಂದರೆ, ಯಾವುದಾದರೂ ವ್ಯಕ್ತಿ ತನ್ನ ನಿಷ್ಠೆಯನ್ನು ಬದಲಿಸುತ್ತಲೇ ಹೋಗುವುದಾಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ನಿತೀಶ್ ಕುಮಾರ್ ಐದು ಬಾರಿ ತಮ್ಮ ರಾಜಕೀಯ ನಿಷ್ಠೆಯನ್ನು ಬದಲಿಸಿರುವುದರಿಂದ ಟೀಕಾಕಾರರು ಅವರನ್ನು ‘ಪಲ್ಟುಮಾರ್’ ಅಥವಾ ‘ಪಲ್ಟುಕುಮಾರ್’ ಎಂದು ವ್ಯಂಗ್ಯವಾಡುತ್ತಿದ್ದಾರೆ.
“ನಾನು ಮೊದಲಿನಿಂದಲೂ ನಿತೀಶ್ ಕುಮಾರ್ ಯಾರ ಪರ ಬೇಕಾದರೂ ವಾಲಬಹುದು ಎಂದು ಹೇಳುತ್ತಲೇ ಬರುತ್ತಿದ್ದೇನೆ. ಇದು ಅವರ ರಾಜಕೀಯದ ಒಂದು ಭಾಗವಾಗಿ ಹೋಗಿದೆ. ಆದರೆ, ಬಿಹಾರದಲ್ಲಿನ ಇಂದಿನ ಬೆಳವಣಿಗೆಗಳು, ಬಿಹಾರದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ನಾಯಕರು ‘ಪಲ್ಟುಮಾರ್ ಗಳು’ ಎಂಬುದನ್ನು ಸಾಬೀತು ಪಡಿಸಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕೂಡಾ ಪಲ್ಟುಮಾರ್ ಗಳು ಎಂಬುದು ದೃಢಪಟ್ಟಿದೆ” ಎಂದು ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ.
ಇದಕ್ಕೂ ಮುನ್ನ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ 2018ರಲ್ಲಿ ಕ್ಲುಪ್ತ ಅವಧಿಗೆ ಜೆಡಿಯು ಪಕ್ಷದ ಉಪಾಧ್ಯಕ್ಷ ಹುದ್ದೆಯವರೆಗೂ ಏರಿದ್ದರು. ಆದರೆ, ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ ಜೆಡಿಯು ನಿರ್ಧಾರವನ್ನು ಟೀಕಿಸಿದ್ದರಿಂದ, ಅವರನ್ನು ಜೆಡಿಯು ಪಕ್ಷದಿಂದ ಉಚ್ಚಾಟಿಸಲಾಗಿತ್ತು.