ಮಾನವ ಲೋಪವೇ ಒಡಿಶಾ ರೈಲು ಅವಘಡಕ್ಕೆ ಕಾರಣ: ರೈಲ್ವೆ ಸುರಕ್ಷತಾ ಕಮಿಷನರ್ ತನಿಖೆಯಲ್ಲಿ ಬಹಿರಂಗ
Photo: PTI
ಬಲಸೋರ್: ಬಲಸೋರ್ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತರು (CRS) ಬುಧವಾರ ರೈಲ್ವೆ ಮಂಡಳಿಗೆ ವರದಿ ಸಲ್ಲಿಸಿದ್ದು, ಮಾನವ ಪ್ರಮಾದ ಮತ್ತು ನಿರ್ಲಕ್ಷ್ಯ ದುರಂತಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾಗಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ವರದಿಯಲ್ಲಿ ಉಲ್ಲೇಖಿಸಿರುವ ದೋಷಗಳ ಬಗ್ಗೆ ವಿವರ ನೀಡಲು ಅವರು ನಿರಾಕರಿಸಿದ್ದಾರೆ.
ಈಗಾಗಲೇ ಸಿಬಿಐ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ತನಿಖೆಯಲ್ಲಿ ಹಸ್ತಕ್ಷೇಪವಾಗಬಾರದು ಎಂಬ ದೃಷ್ಟಿಯಿಂದ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದಿರಲು ರೈಲ್ವೆ ಮಂಡಳಿ ನಿರ್ಧರಿಸಿದೆ ಎಂದು ವಿವರಿಸಿದ್ದಾರೆ. ಸಿಆರ್ಎಸ್ ತನಿಖೆ ಜತೆಗೆ ಸಿಬಿಐ ಕೂಡಾ ದುರಂತದ ಬಗ್ಗೆ ತನಿಖೆ ನಡೆಸುತ್ತಿದೆ.
"CRS ವರದಿಯನ್ನು ನಾವು ಬಹಿರಂಗಪಡಿಸುವುದಿಲ್ಲ; ಏಕೆಂದರೆ ಮತ್ತೊಂದು ಸ್ವತಂತ್ರ ತನಿಖೆ (CBI) ನಡೆಯುತ್ತಿದೆ. ಅಂದರೆ ಈ ವರದಿಯಿಂದಾಗಿ ತನಿಖೆ ಮೇಲೆ ಯಾವುದೇ ಪರಿಣಾಮ ಆಗಬಾರದು ಅಥವಾ ಮಧ್ಯಪ್ರವೇಶ ಮಾಡಿದಂತಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ವರದಿಗಳನ್ನು ಗಮನಿಸಿ ಮತ್ತು ಘಟನೆ ಬಗ್ಗೆ ಒಟ್ಟಾರೆ ಮೌಲ್ಯಮಾಪನ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ" ಎಂದು ಮತ್ತೊಬ್ಬರು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
CRS ವರದಿಯನ್ನು ಈಗಾಗಲೇ ಪೂರ್ವ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷರಿಗೆ ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಕೇವಲ ಇಬ್ಬರಿಗೆ ಈ ವರದಿ ನೀಡಲಾಗಿದ್ದು, ಸಚಿವಾಲಯದ ಉನ್ನತ ಅಧಿಕಾರಿಗಳಿಗಷ್ಟೇ ಲಭ್ಯವಾಗಲಿದೆ" ಎಂದು ಹೇಳಿದ್ದಾರೆ. ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯನ್ನು ನಿರ್ವಹಿಸುವ ಸಿಬ್ಬಂದಿಯ ನಿರ್ಲಕ್ಷ್ಯ ಕೂಡಾ ದುರಂತಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖವಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿಕೊಂಡಿದ್ದಾರೆ.