ಸಾಕು ನಾಯಿಯನ್ನು ಥಳಿಸಬೇಡಿ ಎಂದಿದ್ದಕ್ಕೆ ಪತ್ನಿ, ಇಬ್ಬರು ಮಕ್ಕಳ ಹತ್ಯೆಗೈದು ವ್ಯಕ್ತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಉಜ್ಜಿಯಿನಿ (ಮಧ್ಯಪ್ರದೇಶ): ಸಾಕು ನಾಯಿ ಕುರಿತ ಜಗಳವು ವಿಕೋಪಕ್ಕೆ ತಿರುಗಿ, 45 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು, ನಂತರ ಆತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.
ಈ ಘಟನೆಯು ಜಿಲ್ಲಾಡಳಿತ ಕಚೇರಿಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಬದ್ನಾಗರ್ ಪ್ರದೇಶದಲ್ಲಿರುವ ಆ ವ್ಯಕ್ತಿಯ ಕುಟುಂಬದ ನಿವಾಸದಲ್ಲಿ ರವಿವಾರ ಮುಂಜಾನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ತನಿಖೆಯ ಪ್ರಕಾರ, ದಿಲೀಪ್ ಪವಾರ್ ತಮ್ಮ ಸಾಕು ನಾಯಿಯನ್ನು ಮುಂಜಾನೆ 1 ಗಂಟೆಯ ಸಮಯದಲ್ಲಿ ಥಳಿಸಲು ಪ್ರಾರಂಭಿಸಿದ್ದಾನೆ. ಆಗ ಮಧ್ಯಪ್ರವೇಶಿಸಿರುವ ಪತ್ನಿ ಗಂಗಾ (40), ಪುತ್ರ ಯೋಗೇಂದ್ರ (14) ಹಾಗೂ ಪುತ್ರಿ ನೇಹಾ (17), ಸಾಕು ನಾಯಿಯನ್ನು ಅದರ ಪಾಡಿಗೆ ಬಿಡುವಂತೆ ಪವಾರ್ ಗೆ ಸೂಚಿಸಿದ್ದಾರೆ ಎಂದು ಪೊಲೀಸ್ ಉಪ ವಲಯಾಧಿಕಾರಿ ಮಹೇಂದ್ರ ಸಿಂಗ್ ಪಾರ್ಮರ್ ತಿಳಿಸಿದ್ದಾರೆ.
ಆಕ್ರೋಶಗೊಂಡ ಪವಾರ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಖಡ್ಗದಿಂದ ಇರಿದು ಹತ್ಯೆಗೈದಿದ್ದಾರೆ. ಇದನ್ನು ಕಂಡು ಅವರ ಇನ್ನಿಬ್ಬರು ಮಕ್ಕಳು ರಕ್ಷಣೆಗಾಗಿ ಮನೆಯಿಂದ ಹೊರ ಓಡಿ ಹೋಗಿದ್ದಾರೆ ಎಂದು ಪಾರ್ಮರ್ ಹೇಳಿದ್ದಾರೆ.
ಇದಾದ ಕೆಲ ಹೊತ್ತಿನ ನಂತರ, ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
“ಸದ್ಯ, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈಯ್ಯುವ ಸಮಯದಲ್ಲಿ ಆತ ಪಾನಮತ್ತನಾಗಿದ್ದನೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ” ಎಂದು ಹೇಳಿದ್ದಾರೆ.
ಆರೋಪಿಗೆ ಕೆಲ ತಿಂಗಳಿನಿಂದ ಉದ್ಯೋಗವಿರಲಿಲ್ಲ. ಆತನ ಬಳಿ ಜೀವನ ನಿರ್ವಹಣೆಗಾಗಿ ಸರಕು ಸಾಗಣೆ ವಾಹನವಿತ್ತಾದರೂ, ಕೆಲ ಸಮಯದ ಹಿಂದೆ ಆತ ಅದನ್ನು ಮಾರಾಟ ಮಾಡಿದ್ದ ಎಂದು ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.