ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ: ಪ್ರಧಾನಿ ಮೋದಿ
ನರೇಂದ್ರ ಮೋದಿ | PC : NDTV
ಹೊಸದಿಲ್ಲಿ : “'ವಿಕಸಿತ ಭಾರತ' ಗುರಿಯನ್ನು ಸಾಧಿಸಲು 2047ರವರೆಗೆ 24x7 ಕಾರ್ಯ ನಿರ್ವಹಿಸುವಂತೆ ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
'ಇಂಡಿಯಾ ಟಿವಿ' ಸುದ್ದಿವಾಹಿನಿ ಯೊಂದಿಗೆ ಮಾತನಾಡಿದ ಅವರು, ವಿಶೇಷ ಉದ್ದೇಶಕ್ಕಾಗಿ ದೇವರು ನನ್ನನ್ನು ಕಳುಹಿಸಿದ್ದಾರೆ ಎಂಬುದು ನನ್ನ ಭಾವನೆ. ದೇವರು ನನಗೆ ದಾರಿ ತೋರಿಸಿದ್ದಾನೆ, ದೇವರು ನನಗೆ ಶಕ್ತಿ ನೀಡಿದ್ದಾನೆ. 2047ರ ಒಳಗೆ ನಾನು ಗುರಿಯನ್ನು ಸಾಧಿಸಲಿದ್ದೇನೆ ಎಂದು ನನಗೆ ಸಂಪೂರ್ಣ ಆತ್ಮಸ್ಥೆರ್ಯವಿದೆ. ಗುರಿ ಸಾಧಿತವಾಗುವವರೆಗೆ ದೇವರು ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ'' ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಬಸ್ತಿಯಲ್ಲಿ ಮಂಗಳವಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿ ಅವರು, "ನಮಗೆ ಮತ ಹಾಕುವವರು ನಾನು ಮಾಡುವ ಉತ್ತಮ ಕಾರ್ಯದ ಪುಣ್ಯ ಪಡೆಯುತ್ತಾರೆ'' ಎಂದಿದ್ದರು.
ಈ ಹಿಂದೆ ನ್ಯೂಸ್18 ನಡೆಸಿದ ಸಂದರ್ಶನದಲ್ಲಿ ಪ್ರಧಾನಿ ಅವರು, "ನನ್ನ ತಾಯಿ ಜೀವಂತವಾಗಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ಭಾವಿಸಿದ್ದೆ. ನನ್ನ ತಾಯಿ ಸಾವನ್ನಪ್ಪಿದ ಬಳಿಕ ನಾನು ನನ್ನ ಎಲ್ಲಾ ಅನುಭವಗಳನ್ನು ಒಟ್ಟುಗೂಡಿಸಿ ನೋಡಿದೆ. ಆಗ ನನ್ನನ್ನು ಪರಮಾತ್ಮನೇ ಕಳುಹಿಸಿದ್ದಾನೆ ಎಂದು ಮನವರಿಕೆಯಾಯಿತು” ಎಂದು ಹೇಳಿದ್ದರು.
“ಈ ಶಕ್ತಿ ನನಗೆ ನನ್ನ ಜೈವಿಕ ದೇಹದಿಂದ ಸಿಕ್ಕಿರುವುದ ಬದಲಾಗಿ, ದೇವರು ದಯಪಾಲಿಸಿದ್ದಾನೆ. ದೇವರು ತನ್ನ ಕೆಲಸವ ನನ್ನ ಮೂಲಕ ಮಾಡಿಸಲು ಈ ಸಾಮರ್ಥ್ಯ ಹಾಗೂ ಪ್ರೇರೇಪಣೆ ನೀಡಿದ್ದಾನೆ” ಎಂದಿದ್ದರು.
“ನಾನು ಸಾಧನವಲ್ಲದೆ ಬೇರೇನೂ ಅಲ್ಲ. ಅದಕ್ಕಾಗಿ ನಾನು ಯಾವ ಕಾರ್ಯ ಮಾಡುವಾಗಲೂ ದೇವರು ನನಗೆ ಮಾರ್ಗದಶನ ನೀಡುತ್ತಾನೆ ಎಂದು ನಂಬುತ್ತೇನೆ” ಎಂದು ಅವರು ಹೇಳಿದ್ದರು.
ಕಾಂಗ್ರೆಸ್ ಮಾಧ್ಯಮ ವರಿಷ್ಠ ಜೈರಾಮ್ ರಮೇಶ್ ಅವರು ಮೋದಿ ಅವರ ಹೇಳಿಕೆ “ಹಿಂದೆಂದೂ ಕಾಣದ ಮಟ್ಟದ ಭ್ರಮೆ ಹಾಗೂ ದುರಹಂಕಾರ”ವನ್ನು ಪ್ರತಿಬಿಂಬಿಸಿದೆ ಎಂದು ಹೇಳಿದ್ದಾರೆ. ಇದು ಸನ್ನಿಹಿತವಾದ ಸೋಲಿನ ಸಂಕೇತ ಎಂದು ಅವರು ಬಣ್ಣಿಸಿದ್ದಾರೆ.
ಜನಸಾಮಾನ್ಯರು ಈ ಮಾತು ಹೇಳಿದ್ದರೆ, ಅವರನ್ನು ಮನೋವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಟುವಾಗಿ ಟೀಕಿಸಿದ್ದಾರೆ. ಮೋದಿ ಅವರು ನೀಡಿದ ಹೇಳಿಕೆಯನ್ನು ಸಾಮಾನ್ಯ ವ್ಯಕ್ತಿ ನೀಡುತ್ತಿದ್ದರೆ, ಅವರನ್ನು ನೇರವಾಗಿ ಮನೋವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.