ಇನ್ನೂ ನಾಲ್ಕು ಎನ್ಜಿಒಗಳಿಗೆ ತೆರಿಗೆ ವಿನಾಯಿತಿ ರದ್ದು: ಎರಡು ಪ್ರಕರಣಗಳಲ್ಲಿ ‘ಅದಾನಿ ವಿರುದ್ಧ ಪ್ರತಿಭಟನೆ’ ರದ್ದತಿಗೆ ಕಾರಣ; ವರದಿ
ನಾಲ್ಕು NGO ಗಳ ಲೋಗೋಗಳು | Photo : newslaundry
ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ಇನ್ನೂ ನಾಲ್ಕು ಎನ್ಜಿಒಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ಸೌಲಭ್ಯವನ್ನು ರದ್ದುಗೊಳಿಸಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ರದ್ದತಿಯನ್ನು ಅದಾನಿ ಗ್ರೂಪ್ ವಿರುದ್ಧ ಪ್ರತಿಭಟನೆಯೊಂದಿಗೆ ತಳುಕು ಹಾಕಲಾಗಿದೆ ಎಂದು newslaundry.com ವರದಿ ಮಾಡಿದೆ.
ಆಕ್ಸ್ಫಾಮ್ ಇಂಡಿಯಾ, ಕೇರ್ ಇಂಡಿಯಾ, ಲೀಗಲ್ ಇನಿಷಿಯೇಟಿವ್ ಫಾರ್ ಫಾರೆಸ್ಟ್ ಆ್ಯಂಡ್ ಎನ್ವಿರಾನ್ಮೆಂಟ್(ಲೈಫ್) ಮತ್ತು ಎನ್ವಿರಾನಿಕ್ಸ್ ಟ್ರಸ್ಟ್ ಈ ಎನ್ಜಿಒಗಳಾಗಿದ್ದು, ಇಲಾಖೆಯು ಸುಮಾರು ಎರಡು ವಾರಗಳ ಹಿಂದೆ ಈ ಕ್ರಮವನ್ನು ಕೈಗೊಂಡಿದೆ.
ಈ ವರ್ಷದ ಜುಲೈನಲ್ಲಿ ಚಿಂತನ ಚಾವಡಿ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ನ ತೆರಿಗೆ ವಿನಾಯಿತಿ ಸೌಲಭ್ಯವನ್ನು ಸಹ ಹಿಂದೆಗೆದುಕೊಳ್ಳಲಾಗಿತ್ತು.
ಆಕ್ಸ್ಫಾಮ್ ಇಂಡಿಯಾ ಮತ್ತು ಎನ್ವಿರಾನಿಕ್ಟ್ ಟ್ರಸ್ಟ್ಗೆ ಆದಾಯ ತೆರಿಗೆ ಇಲಾಖೆಯು ಬರೆದಿರುವ ಪತ್ರದ ಪ್ರಕಾರ, ಅದಾನಿ ಗ್ರೂಪ್ಗೆ ಸಂಬಂಧಿಸಿದಂತೆ ಈ ಎನ್ಜಿಒಗಳ ಚಟುವಟಿಕೆಗಳು ಅವುಗಳ ಉದ್ದೇಶಗಳೊಂದಿಗೆ ತಾಳೆಯಾಗುತ್ತಿಲ್ಲ.
ಆಕ್ಸ್ಫಾಮ್ ಇಂಡಿಯಾ ಅದಾನಿ ಪೋರ್ಟ್ಸ್ನ್ನು ಡಿ-ಲಿಸ್ಟ್ ಮಾಡುವಂತೆ ಯುಎನ್ ಗ್ಲೋಬಲ್ ಇಂಪ್ಯಾಕ್ಟ್ಗೆ ನಿವೇದನೆಯನ್ನು ಸಲ್ಲಿಸಿದ್ದು, ಇದು ಅದರ ಘೋಷಿತ ಉದ್ದೇಶಗಳಿಂದ ಭಿನ್ನವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಆರೋಪಿಸಿದೆ.
ಟ್ರಸ್ಟ್ ಒಡಿಶಾದಲ್ಲಿ ಜಿಂದಾಲ್ ಸ್ಟೀಲ್ ವರ್ಕ್ಸ್ ಮತ್ತು ಅದಾನಿ ಕೋಲ್ ಪ್ರಾಜೆಕ್ಟ್ಸ್ ವಿರುದ್ಧ ಪ್ರತಿಭಟನೆಗಾಗಿ ಮಿನರಲ್ ಇನ್ಹೆರಿಟರ್ಸ್ ರೈಟ್ ಅಸೋಸಿಯೇಷನ್ ಜೊತೆ ಸೇರಿಕೊಂಡಿದ್ದು,ಇದು ಅದರ ಘೋಷಿತ ಉದ್ದೇಶಗಳಿಗೆ ಅನುಗುಣವಾಗಿಲ್ಲ ಎಂದು ಎನ್ವಿರಾನಿಕ್ಸ್ ಟ್ರಸ್ಟ್ಗೆ ಬರೆದಿರುವ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.
ಆಕ್ಸ್ಫಾಮ್ ಇಂಡಿಯಾ ತನ್ನ ಘೋಷಿತ ಉದ್ದೇಶಗಳಿಗೆ ವಿರುದ್ಧವಾಗಿ ಸರಕಾರದ ನಿಯತ್ತನ್ನು ಪ್ರಶ್ನಿಸುತ್ತಿದೆ ಮತ್ತು ತನ್ನ ಸಭೆಯಲ್ಲಿ ರಾಜಕೀಯ ವಿಷಯಗಳನ್ನು ಚರ್ಚಿಸುತ್ತಿದೆ ಎಂದು ಪತ್ರದಲ್ಲಿ ಹೇಳಿರುವ ಇಲಾಖೆಯು, ಅದು ನಿರ್ದಿಷ್ಟ ಸಮುದಾಯವೊಂದರ ಲಾಭಕ್ಕಾಗಿ ಕೆಲಸ ಮಾಡುತ್ತಿದೆ ಎಂದೂ ಆರೋಪಿಸಿದೆ.
ಎನ್ವಿರಾನಿಕ್ಸ್ ಟ್ರಸ್ಟ್ಗೆ ಬರೆದಿರುವ ಪತ್ರದಲ್ಲಿ ಇಲಾಖೆಯು,ಅದು ಜೆಎಸ್ಡಬ್ಯು ಸ್ಥಾವರಗಳ ವಿರುದ್ಧ ಧಿಂಕಿಯಾ ಪ್ರತಿಭಟನೆಗಳಲ್ಲಿ ಭಾಗಿಯಾಗಿತ್ತು ಎಂದು ಇಲಾಖೆಯು ತಿಳಿಸಿದೆ.
ಒಡಿಶಾದ ಧಿಂಕಿಯಾ ಗ್ರಾಮದ ನಿವಾಸಿಗಳು ೧೩.೨ ಕೋ.ಟನ್ ಸಾಮರ್ಥ್ಯದ ಉಕ್ಕು ಸ್ಥಾವರದ ಸ್ಥಾಪನೆಗಾಗಿ ೧,೦೦೦ ಹೆಕ್ಟೇರ್ಗೂ ಅಧಿಕ ಭೂಮಿಯನ್ನು ಜಿಂದಾಲ್ ಸ್ಟೀಲ್ ವರ್ಕ್ಸ್ಗೆ ವರ್ಗಾವಣೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೈಗಾರಿಕೆಗಳ ವಿರುದ್ಧ ಪ್ರಶ್ನೆಗಳನ್ನೆತ್ತುವುದು ಕಾನೂನುಬಾಹಿರ!
ತಮ್ಮ ತೆರಿಗೆ ವಿನಾಯಿತಿಯ ರದ್ದತಿಯ ಕುರಿತು ಪ್ರತಿಕ್ರಿಯಿಸದಿರಲು ಕೇರ್ ಇಂಡಿಯಾ ಮತ್ತು ಲೈಫ್ನ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರತೀಕಾರ ಕ್ರಮದ ಭೀತಿಯಿಂದಾಗಿ ಆದಾಯ ತೆರಿಗೆ ಇಲಾಖೆಯ ಪತ್ರದಲ್ಲಿನ ಯಾವುದೇ ನಿರ್ದಿಷ್ಟ ವಿಷಯನ್ನು ಬಹಿರಂಗಗೊಳಿಸಲು ತಾವು ಬಯಸುವುದಿಲ್ಲ ಎಂದು ಕೇರ್ ಇಂಡಿಯಾದ ಅಧಿಕಾರಿಯೋರ್ವರು ತಿಳಿಸಿದರು.
‘ನಾವು ಪ್ರಸ್ತುತ ಪರ್ಯಾಯಗಳನ್ನ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆಗಳಿಲ್ಲ’ ಎಂದು ಲೈಫ್ ಅಧಿಕಾರಿಗಳು ಹೇಳಿದರೆ, ‘ಮುಂಬರುವ ವಾರಗಳಲ್ಲಿ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ ’ಎಂದು ಎನ್ವಿರಾನಿಕ್ಸ್ ಟ್ರಸ್ಟ್ನ ಅಧಿಕಾರಿಗಳು ತಿಳಿಸಿದ್ದಾರೆ.
‘ಒಂದು ಸಂಸ್ಥೆಯಾಗಿ ನಮ್ಮ ನಡವಳಿಕೆಗೂ ಆದೇಶಕ್ಕೂ ಯಾವುದೇ ಸಂಬಂಧವಿದೆ ಎಂದು ನಾನು ಭಾವಿಸಿಲ್ಲ. ಭಾರತದಲ್ಲಿ ಕೈಗಾರಿಕೆಗಳ ವಿರುದ್ಧ ಪ್ರಶ್ನೆಗಳನ್ನೆತ್ತುವುದು ಈಗ ಕಾನೂನುಬಾಹಿರವಾಗಿದೆ, ಅಷ್ಟೇ ’ಎಂದು ಟ್ರಸ್ಟ್ನ ಹಿರಿಯ ಅಧಿಕಾರಿ ರಾಮಮೂರ್ತಿ ಶ್ರೀಧರ ಹೇಳಿದರು.
ದೇಶಾದ್ಯಂತ ಎನ್ಜಿಒಗಳ ವಿರುದ್ಧ ನಡೆಯುತ್ತಿರುವ ದಾಳಿಗಳ ನಡುವೆಯೇ ತೆರಿಗೆ ವಿನಾಯಿತಿ ರದ್ದತಿಯ ಈ ಆದೇಶ ಹೊರಬಿದ್ದಿದೆ. ಇದು ಸರಕಾರವನ್ನು ಟೀಕಿಸುವ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎನ್ನುತ್ತಾರೆ ನಾಗರಿಕ ಸಮಾಜದ ಸದಸ್ಯರು ಮತ್ತು ರಾಜಕೀಯ ವಿಶ್ಲೇಷಕರು.
ಆಕ್ಸ್ಫಾಮ್, ಲೈಫ್ ಮತ್ತು ಎನ್ವಿರಾನಿಕ್ಸ್ ಟ್ರಸ್ಟ್ನ ಎಫ್ಸಿಆರ್ಎ ಪರವಾನಿಗೆಗಳನ್ನೂ ಈಗಾಗಲೇ ರದ್ದುಗೊಳಿಸಲಾಗಿದೆ.