ದೇವಾಲಯಗಳ ಧ್ವನಿವರ್ಧಕ ಬಗ್ಗೆ ಐಎಎಸ್ ಅಧಿಕಾರಿ ಹೇಳಿಕೆ: ಮಧ್ಯಪ್ರದೇಶದಲ್ಲಿ ಭುಗಿಲೆದ್ದ ವಿವಾದ
ಹಿರಿಯ ಐಎಎಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್ PC: x.com/ndtv
ಭೋಪಾಲ್: ದೇವಸ್ಥಾನಗಳಲ್ಲಿ ಅಳವಡಿಸಿರುವ ಧ್ವನಿವರ್ಧಕ ವ್ಯವಸ್ಥೆಯಿಂದಾಗಿ ಶಬ್ದಮಾಲಿನ್ಯವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಹಿರಿಯ ಐಎಎಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್ ನೀಡಿರುವ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹೇಳಿಕೆಯನ್ನು ಖಂಡಿಸಿ ಹಲವು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.
ಭೋಪಾಲ್ ನಲ್ಲಿ ಕಳೆದ ವಾರ ದುರ್ಗಾ ಮೂರ್ತಿ ವಿಸರ್ಜನೆ ವೇಳೆ 13 ವರ್ಷದ ಬಾಲಕ ಮೃತಪಟ್ಟ ಬಳಿಕ ಸಾರ್ವಜನಿಕ ಘೋಷಣಾ ವ್ಯವಸ್ಥೆಯಿಂದಾಗುವ ಶಬ್ದ ಮಾಲಿನ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿಜೆ ಸೌಂಡ್ ಗೆ ಹೆಜ್ಜೆ ಹಾಕುತ್ತಿದ್ದ ಬಾಲಕ ಕುಸಿದು ಬಿದ್ದು ಮೃತಪಟ್ಟಿದ್ದ. ಈ ಬಗ್ಗೆ ಮಧ್ಯಪ್ರದೇಶ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದಂತೆಯೇ, ಶಬ್ದಮಾಲಿನ್ಯದ ವಿಚಾರದಲ್ಲಿ ಚರ್ಚೆಯೂ ಆರಂಭವಾಗಿತ್ತು.
ಕಾನೂನು ಜಾರಿಯಲ್ಲಿನ ಅಸಮಾನತೆ ಬಗ್ಗೆ ಪತ್ರಕರ್ತರೊಬ್ಬರು ಎಕ್ಸ್ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಮಸೀದಿಯ ಸಾರ್ವಜನಿಕ ಘೋಷಣಾ ವ್ಯವಸ್ಥೆ ಮತ್ತು ಇಂಥ ಸ್ಥಳಗಳಲ್ಲಿ ಡಿಜೆ ಮ್ಯೂಸಿಕ್ ನಿಂದಾಗುವ ತೊಂದರೆಯನ್ನು ವಿವರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶೈಲಬಾಬಾ ಮಾರ್ಟಿನ್, ದೇವಾಲಯಗಳಲ್ಲಿನ ಸಾರ್ವಜನಿಕ ಘೋಷಣಾ ವ್ಯವಸ್ಥೆಯಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ಪ್ರಶ್ನಿಸಿದ್ದರು. ಇಂಥ ಪ್ರಕ್ಷುಬ್ಧತೆಗಳು ಏಕಾಗುತ್ತಿವೆ. ಇದು ದೂರದ ಹಲವು ಬೀದಿಗಳ ವರೆಗೆ ಕೇಳುತ್ತದೆ ಹಾಗೂ ತಡರಾತ್ರಿವರೆಗೂ ಇದು ಮುಂದುವರಿಯುತ್ತದೆ ಎಂದು ವಿವರಿಸಿದ್ದರು.
ಆದರೆ ಈ ಹೇಳಿಕೆ ಬಲಪಂಥೀಯ ಸಂಘಟನೆಗಳಿಗೆ ಪಥ್ಯವಾಗಿಲ್ಲ. ಸಂಸ್ಕೃತಿ ಬಚಾವೋ ಮಂಚ್ ಮುಖ್ಯಸ್ಥ ಚಂದ್ರಶೇಖರ ತಿವಾರಿ ಈ ಸಂಬಂಧ ಹೇಳಿಕೆ ನೀಡಿ, ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಪ್ರತಿಕ್ರಿಯಿಸಿ, ಶೈಲಬಾಬಾ ಮಾರ್ಟಿನ್ ನೈಜ ಪ್ರಶ್ನೆಯನ್ನು ಎತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಪಕ್ಷಪಾತದ ನೀತಿ ವಿರುದ್ಧ ಧ್ವನಿ ಎತ್ತಿರುವುದು ಸರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.