ಅರವಿಂದ್ ಕೇಜ್ರಿವಾಲ್ ಬಂಧನಕ್ಕೊಳಗಾದರೆ ʼವರ್ಕ್ ಫ್ರಂ ಜೈಲ್ʼ ಮಾಡಲಿದ್ದಾರೆ ಎಂದ ಆಪ್!
ಜೈಲಿನಿಂದಲೇ ಸಂಪುಟ ಸಭೆ ನಡೆಸಲೂ ಯೋಚನೆ
ಅರವಿಂದ್ ಕೇಜ್ರಿವಾಲ್ Photo- PTI
ಹೊಸದಿಲ್ಲಿ: ಒಂದು ವೇಳೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇನಾದರೂ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದರೆ, ಅವರು ಜೈಲಿನಿಂದಲೇ ಕಾರ್ಯನಿರ್ವಹಿಸಲು ನ್ಯಾಯಾಲಯದ ಅನುಮತಿ ಕೋರಲಾಗುವುದು ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಇಂದು ನಡೆದ ಸಭೆಯಲ್ಲಿ, ಒಂದು ವೇಳೆ ಕೇಂದ್ರ ತನಿಖಾ ಸಂಸ್ಥೆಗಳೇನಾದರೂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರೆ, ಅವರು ಜೈಲಿನಿಂದಲೇ ಕಾರ್ಯನಿರ್ವಹಿಸಬೇಕು ಎಂದು ಆಪ್ ಪಕ್ಷದ ಶಾಸಕರು ಸೂಚಿಸಿದರು ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ದಿಲ್ಲಿ ಸಚಿವೆ ಅತಿಶಿ, “ನಾವು ಜನರ ನಡುವೆ ಹೋಗುತ್ತಿದ್ದೇವೆ. ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅವರೆಲ್ಲ ಹೇಳುತ್ತಿದ್ದಾರೆ. ಹೀಗಾಗಿ, ಒಂದು ವೇಳೆ ಮುಖ್ಯಮಂತ್ರಿಯೇನಾದರೂ ಜೈಲಿಗೆ ಹೋದರೂ ಅವರು ಮುಖ್ಯಮಂತ್ರಿಯಾಗಿಯೇ ಉಳಿಯಬೇಕು ಎಂದು ಎಲ್ಲ ಶಾಸಕರು ಮನವಿ ಮಾಡಿದ್ದಾರೆ. ದಿಲ್ಲಿಯ ಜನರು ಅವರನ್ನು ಮುಖ್ಯಮಂತ್ರಿಯನ್ನಾಗಿ ಚುನಾಯಿಸಿದ್ದಾರೆ ಹಾಗೂ ಅವರು ಮುಖ್ಯಮಂತ್ರಿಯಾಗಿಯೇ ಉಳಿಯಬೇಕು” ಎಂದು ಹೇಳಿದ್ದಾರೆ.
“ನಾವು ನ್ಯಾಯಾಲಯಕ್ಕೆ ಹೋಗಿ, ಜೈಲಿನಲ್ಲೇ ಸಂಪುಟ ಸಭೆ ನಡೆಸಲು ಅನುಮತಿ ನೀಡಬೇಕು ಎಂದು ಕೋರುತ್ತೇವೆ” ಎಂದೂ ಅವರು ತಿಳಿಸಿದ್ದಾರೆ.
ಅಬಕಾರಿ ನೀತಿ ಹಗರಣವನ್ನು ಅಕ್ರಮ ಹಣ ವರ್ಗಾವಣೆ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು, ಮುಖ್ಯಮಂತ್ರಿ ಕೇಜ್ರಿವಾಲ್ ಗೆ ನ.2ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ಆ ಸಮನ್ಸ್ ಅನ್ನು ಅರವಿಂದ್ ಕೇಜ್ರಿವಾಲ್ ತಪ್ಪಿಸಿಕೊಂಡಿರುವುದರಿಂದ ಅವರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೂ ಮುನ್ನ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತು.
ಇದಕ್ಕೂ ಮುನ್ನ, ಫೆಬ್ರವರಿ ತಿಂಗಳಲ್ಲಿ ಬಂಧನಕ್ಕೊಳಗಾಗಿ, ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈಗಲೂ ಜೈಲಿನಲ್ಲಿದ್ದಾರೆ. ಕಳೆದ ವಾರ, ಮನೀಶ್ ಸಿಸೋಡಿಯಾರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ತನಿಖಾ ಸಂಸ್ಥೆಗಳು ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸಂಭನೀಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿವೆ ಎಂದು ಹೇಳಿತ್ತು.