ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನರೇಗಾ ವೇತನ 250 ರೂ. ನಿಂದ 400ಕ್ಕೆ ಏರಿಕೆ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಸೆಗಾಂವ್ (ಮಧ್ಯಪ್ರದೇಶ): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನರೇಗಾ ಯೋಜನೆಯಡಿ ನೀಡಲಾಗುತ್ತಿರುವ ವೇತನವನ್ನು 250 ರೂಪಾಯಿಯಿಂದ 400ಕ್ಕೇರಿಸಲಾಗುವುದು ಎಂದು ಸೋಮವಾರ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ಮಧ್ಯಪ್ರದೇಶದ ಸೆಗಾಂವ್ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಕಾಂಗ್ರೆಸ್ ಪಕ್ಷವೇನಾದರೂ ಕೇಂದ್ರದಲ್ಲಿ ಸರಕಾರ ರಚಿಸಿದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಕಾಂಗ್ರೆಸ್ ಪಕ್ಷದ ನೂತನ ಉದ್ಯೋಗ ಯೋಜನೆಯಾದ 'ಮೊದಲ ನೌಕರಿ ಖಾತ್ರಿ' ಅಡಿ ದೇಶದಲ್ಲಿನ ನಿರುದ್ಯೋಗಿ ಯುವಕರಿಗೆ ಒಂದು ವರ್ಷದ ಉದ್ಯೋಗವನ್ನು ಖಾತರಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸೆಗಾಂವ್ ಅನ್ನು ಒಳಗೊಂಡಿರುವ ಖಾರ್ಗೋನ್ ಲೋಕಸಭಾ ಕ್ಷೇತ್ರದಿಂದ ಪೋರ್ಲಾಲ್ ಖರ್ತೆ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ. "ಈ ಚುನಾವಣೆಯಲ್ಲಿ ಸಂವಿಧಾನ, ಮೀಸಲಾತಿಯಲ್ಲದೆ ಬುಡಕಟ್ಟು ಜನರ ನೀರು, ಅರಣ್ಯ ಮತ್ತು ನೆಲ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳನ್ನು ರಕ್ಷಿಸಲು ಹೋರಾಡಲಾಗುತ್ತಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
ವಯನಾಡ್ ಸಂಸದರೂ ಆಗಿರುವ ರಾಹುಲ್ ಗಾಂಧಿ ಅವರು ಕಳೆದ ಕೆಲವು ವಾರಗಳಿಂದ ರೈತರು, ನರೇಗಾ ವೇತನ, ಮೀಸಲಾತಿ ಹಾಗೂ ಸಂವಿಧಾನವನ್ನು ರಕ್ಷಿಸುವ ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳ ಕುರಿತು ಮಾತನಾಡುತ್ತಿದ್ದಾರೆ. ಅಗತ್ಯವಿರುವ ಸಮುದಾಯಗಳಿಗೆ ತಕ್ಕಷ್ಟು ಮೀಸಲಾತಿ ಒದಗಿಸಲು ಜಾತಿ ಸಮೀಕ್ಷೆ ನಡೆಸಲಾಗುವುದು ಹಾಗೂ ಮೀಸಲಾತಿ ಪ್ರಮಾಣವನ್ನು ಶೇ. 50 ಮಿತಿಗಿಂತ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷವೂ ಭರವಸೆ ನೀಡಿದೆ.
ಕಾಂಗ್ರೆಸ್ ಪಕ್ಷವೇನಾದರೂ ಸರಕಾರ ರಚಿಸಿದರೆ ನರೇಗಾ ಯೋಜನೆಯಡಿ ನೀಡಲಾಗುತ್ತಿರುವ ಪ್ರತಿ ದಿನದ ವೇತನವನ್ನು 400 ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದು ಕಳೆದ ತಿಂಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಭರವಸೆ ನೀಡಿದ್ದರು.