ಚುನಾವಣಾ ಬಾಂಡ್ ಕೈಬಿಟ್ಟರೆ, ನಗದು ಹರಿವು ಸಾಧ್ಯತೆ: ಆತಂಕದಲ್ಲಿ ಆಯೋಗ
Photo: PTI
ಹೊಸದಿಲ್ಲಿ: ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ದಾವೆಯ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಇನ್ನೂ ಕಾಯಲಾಗುತ್ತಿದ್ದರೂ, ಚುನಾವಣಾ ಆಯೋಗದಲ್ಲಿ ಈ ಬಗ್ಗೆ ಹಲವು ಆತಂತಗಳು ಮುಂದುವರಿದಿವೆ. ಚುನಾವಣಾ ಬಾಂಡ್ ವ್ಯವಸ್ಥೆ ಕೈಬಿಟ್ಟರೆ, ಮುಖ್ಯವಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಲೆಕ್ಕಕ್ಕೆ ಸಿಗದ ನಗದು ಹರಿವು ರಾಜಕೀಯ ನೆರವಿನ ಪ್ರಾಥಮಿಕ ವಿಧಾನವಾಗಿ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.
ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಯ ಮೂಲವನ್ನು ಬಹಿರಂಗಪಡಿಸದಿರುವ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ ವ್ಯವಸ್ಥೆ ಪಾರದರ್ಶಕವಲ್ಲ ಎಂಬ ನಿಲುವು ಚುನಾವಣಾ ಆಯೋಗದ್ದಾಗಿದ್ದರೂ, ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಗಳಿಗೆ ವಿವರಣೆ ನೀಡದ ಹಣವನ್ನು ಸ್ವೀಕರಿಸುವ ಸಾಧ್ಯತೆ ಇದೆ ಎನ್ನುವುದು ಆಯೋಗದ ಅಭಿಪ್ರಾಯ.
ನಿರ್ದಿಷ್ಟ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ನೀಡುವ ದೇಣಿಗೆ ಅನಾಮಧೇಯವಾಗಿರುವ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸಿದೆ. ಆದರೆ ಇದು ರಾಜಕೀಯ ಪಕ್ಷಗಳಿಗೆ ಲೆಕ್ಕಕ್ಕೆ ಸಿಗದಂತೆ ನೀಡುವ ದೇಣಿಗೆಯಲ್ಲಿ ಶೇಕಡ 80ರಷ್ಟು ಕಡಿಮೆಯಾಗಲು ಕಾರಣವಾಗಿದೆ ಎನ್ನುವುದು ಆಯೋಗದ ವಾದ. ರಾಜಕೀಯ ದೇಣಿಗೆಯಲ್ಲಿ ಸ್ವಚ್ಛ ಹಣದ ಮರುಪೂರಣ ಬಾಂಡ್ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎನ್ನುವುದು ಸರ್ಕಾರದ ವಾದ. ಇದು ಬ್ಯಾಂಕಿಂಗ್ ಚಾನಲ್ ಮೂಲಕ ಹಾಗೂ ಎಲ್ಲ ಬದ್ಧತೆಗಳಿಗೆ ಅನುಸಾರವಾಗಿ ನಡೆಯುತ್ತದೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿದ ದೇಣಿಗೆಯ ಸಮಗ್ರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗ, ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.