ಹಾರ್ದಿಕ್ ಪಾಂಡ್ಯರನ್ನು ಗೇಲಿ ಮಾಡಿದರೆ ಅಭಿಮಾನಿಗಳು ವಶಕ್ಕೆ?
ವದಂತಿಗಳಿಗೆ ಸ್ಪಷ್ಟೀಕರಣ ನೀಡಿದ ಮುಂಬೈ ಕ್ರಿಕೆಟ್ ಅಸೋಸಿಯೇಷನ್
ಹಾರ್ದಿಕ್ ಪಾಂಡ್ಯ | Photo: NDTV
ಮುಂಬೈ: ಈ ಬಾರಿಯ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಅಭಿಮಾನಿಗಳು ಟೀಕೆ ಮಾಡುತ್ತಿದ್ದಾರೆ. 2024ರ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಪದಾರ್ಪಣೆ ಮಾಡಿರುವ ಹಾರ್ದಿಕ್ ಪಾಂಡ್ಯ, ಮೊದಲೆರಡು ಪಂದ್ಯಗಳಲ್ಲಿ ಅಭಿಮಾನಿಗಳು ಸಾಕಷ್ಟು ಗೇಲಿ ಮಾಡಿದ್ದರು. ಮುಂಬೈ ಇಂಡಿಯನ್ಸ್ ತಂಡವು ತಾನಾಡಿದ ಮೊದಲೆರಡು ಪಂದ್ಯಗಳಲ್ಲೂ ಪರಾಭವಗೊಂಡಿದ್ದು, ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಈ ನಡುವೆ, ಹಾರ್ದಿಕ್ ಪಾಂಡ್ಯ ಗೇಲಿ ಮಾಡುವ ಅಭಿಮಾನಿಗಳನ್ನು ವಶಕ್ಕೆ ಪಡೆಯಲಾಗುತ್ತದೆ ಎಂಬ ವದಂತಿಗಳು ವೈರಲ್ ಅಗಿವೆ. ಇದರ ಬೆನ್ನಿಗೇ ಅಂತಹ ವದಂತಿಗಳನ್ನು ಅಲ್ಲಗಳೆದಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್, ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರ ನಡವಳಿಕೆ ಕುರಿತಂತೆ ಇರುವ ಬಿಸಿಸಿಐ ಮಾರ್ಗಸೂಚಿಗಳನ್ನು ಮಾತ್ರ ಪಾಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
"ಈ ಪಂದ್ಯಕ್ಕೆ ಯಾವುದೇ ನಿರ್ದಿಷ್ಟ ಸೂಚನೆಯನ್ನು ನೀಡಲಾಗಿಲ್ಲ. ಹಲವಾರು ವರ್ಷಗಳಿಂದ ಪ್ರೇಕ್ಷಕರ ನಡವಳಿಕೆಯ ಕುರಿತು ಬಿಸಿಸಿಐ ರೂಪಿಸಿರುವ ಮಾರ್ಗಸೂಚಿಗಳನ್ನೇ ಪಾಲಿಸಲಾಗುವುದು" ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ನಡುವೆ, ಹಾರ್ದಿಕ್ ಪಾಂಡ್ಯ ನಾಯಕತ್ವದಡಿ ರೋಹಿತ್ ಶರ್ಮ ಆಡುವುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಭಾರತೀಯ ಬೌಲರ್ ರವಿಚಂದ್ರನ್ ಅಶ್ವಿನ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸೌರವ್ ಗಂಗೂಲಿಯಂಥ ದಿಗ್ಗಜ ಆಟಗಾರರೇ ಆಡಿದ್ದುದನ್ನು ನೆನಪಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಸಿನಿಮಾ ಅಭಿಮಾನಿಗಳಂತೆ ತಾರಾ ಸಮರ ನಡೆಸುವುದನ್ನೂ ಅವರು ಬಲವಾಗಿ ಖಂಡಿಸಿದ್ದಾರೆ.