ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ಹೊರಗಡೆ ಕಳಿಸಿದರೆ ಕ್ರಮ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ
ದಿನೇಶ್ ಗುಂಡೂರಾವ್
ಬೆಂಗಳೂರು : ಸರಕಾರಿ ಆಸ್ಪತ್ರೆಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡೆಂಗ್ಯೂ ಪರೀಕ್ಷೆ ಮಾಡಿಸಿಕೊಳ್ಳಲು ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ, ಲ್ಯಾಬ್ಗಳಿಗೆ ಕಳುಹಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ʼವಾರ್ತಾಭಾರತಿʼಯ ಪಾಯಿಂಟ್ ಆಫ್ ವಿವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೆಂಗ್ಯೂ ಬರದಂತೆ ಎಚ್ಚರ ವಹಿಸುವುದು ಮುಖ್ಯ. ಡೆಂಗ್ಯೂ ನಿಯಂತ್ರಣ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳ ಜೊತೆ ಸಭೆಗಳನ್ನು ನಡೆಸಲಾಗಿದೆ. ಪ್ರತೀ ಶುಕ್ರವಾರ ಡೆಂಗ್ಯೂ ಡ್ರೈವ್ ಹಮ್ಮಿಕೊಳ್ಳಲಾಗುವುದು ಎಂದರು.
ಡೆಂಗ್ಯೂ ಸೊಳ್ಳೆಯು ಶುದ್ಧ ನೀರಿನಲ್ಲಿ ಹುಟ್ಟುತ್ತದೆ. ಇದು ಹಗಲು ಹೊತ್ತು ಮಾತ್ರ ಕಚ್ಚುತ್ತದೆ. ಮನೆಗಳಲ್ಲಿ ಸಂಗ್ರಹಿಸುವ ನೀರಿನ ಆಗರಗಳೇ ಇದಕ್ಕೆ ಮೂಲ. ಮನೆಗಳಲ್ಲಿ ನೀರು ಸಂಗ್ರಹಿಸುವಾಗ ಎಚ್ಚರವಹಿಸಬೇಕು. ನೀರಿನ ತೊಟ್ಟಿಗಳಲ್ಲಿ, ಬಳಸಿ ಬಿಸಾಡಿದ ಡಬ್ಬಗಳಲ್ಲಿ, ಗೆರಟೆಗಳಲ್ಲಿ ಸೊಳ್ಳೆ ಉತ್ಪತ್ತಿ ಆಗದ ಹಾಗೆ ನೋಡಿಕೊಳ್ಳಬೇಕು ಎಂದರು.
ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮನೆ ಮೆನೆಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೆ. ಶುಕ್ರವಾರದ ಡೆಂಗ್ಯೂ ಡ್ರೈವ್ ದಿನ ಮನೆಗಳಲ್ಲಿ ಫಾಗಿಂಗ್ ಮಾಡಿ ಸೊಳ್ಳೆ ನಾಶ ಮಾಡುತ್ತಿದ್ದಾರೆ. ಈಗಾಗಲೇ ಡೆಂಗ್ಯೂ ಜಾಗೃತಿ ಮೂಡಿಸುವ ಜಾಹೀರಾತು ನೀಡಿದ್ದೇವೆ. ಅಧಿಕಾರಿಗಳು ರೇಡಿಯೋ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾರೆ. ಮನೆಗಳಲ್ಲಿ ಡೆಂಗ್ಯೂ ಬರದಂತೆ ಏನು ಮಾಡಬೇಕು ಎನ್ನುವ ಕುರಿತು ವೀಡಿಯೊ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಹೇಳಿದ್ದಾರೆ.
ಕಾರ್ಯಕ್ರಮದ ವೀಡಿಯೊ ಇಲ್ಲಿದೆ...