ಏಕಕಾಲಿಕ ಚುನಾವಣೆ ನಡೆಸಿದರೆ, ಪ್ರತಿ 15 ವರ್ಷಗಳಿಗೆ ಹೊಸ ಇವಿಎಮ್ ಗಳ ಖರೀದಿಗೆ 10,000 ಕೋಟಿ ರೂ ಅಗತ್ಯ : ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ : ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಿದರೆ ಪ್ರತಿ 15 ವರ್ಷಗಳ ನಂತರ ಹೊಸ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳ ಖರೀದಿಗಾಗಿ ಸುಮಾರು 10,000 ಕೋಟಿ ರೂ.ಗಳು ಅಗತ್ಯವಾಗಲಿವೆ ಎಂದು ಚುನಾವಣಾ ಆಯೋಗವು ಹೇಳಿದೆ.
ಯಾವುದೇ ಒಂದು ಇವಿಎಂ ಜೀವಿತಾವಧಿ 15 ವರ್ಷಗಳವರೆಗೆ ಇರುತ್ತದೆ. ಇದರ ಪ್ರಕಾರ ಒಂದು ಇವಿಎಮನ್ನು ಏಕಕಾಲಿಕ ಚುನಾವಣೆಗಳನ್ನು ನಡೆಸಿದರೆ ಮೂರು ಅವಧಿಗೆ ಬಳಸಬಹುದು ಎಂದು ಆಯೋಗವು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಈ ವರ್ಷ ಲೋಕಸಭಾ ಚುನಾವಣೆಗಳಿಗಾಗಿ ಸುಮಾರು 11.80 ಲಕ್ಷ ಮತಗಟ್ಟೆಗಳ ಸ್ಥಾಪನೆ ಅಗತ್ಯವಾಗಲಿದೆ ಎಂದು ಅಂದಾಜಿಸಿರುವ ಆಯೋಗವು, ವಿಧಾನಸಭಾ ಚುನಾವಣೆಗಳೂ ಏಕಕಾಲದಲ್ಲಿ ನಡೆದರೆ ಹೆಚ್ಚು ಇವಿಎಮ್ ಗಳು ಅಗತ್ಯವಾಗುತ್ತವೆ ಎಂದು ತಿಳಿಸಿದೆ.
ಪ್ರತಿ ಮತಗಟ್ಟೆಯಲ್ಲಿ ಒಂದು ಲೋಕಸಭೆಗಾಗಿ ಮತ್ತು ಇನ್ನೊಂದು ವಿಧಾನಸಭೆಗಾಗಿ, ಹೀಗೆ ಕನಿಷ್ಠ ಎರಡು ಇವಿಎಮ್ ಗಳು ಅಗತ್ಯವಾಗುತ್ತವೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಮತದಾನದ ದಿನ ಸೇರಿದಂತೆ ವಿವಿಧ ಹಂತಗಳಲ್ಲಿ ದೋಷಪೂರ್ಣ ಘಟಕಗಳನ್ನು ಬದಲಿಸಲು ಹೆಚ್ಚುವರಿ ಕಂಟ್ರೋಲ್ ಯೂನಿಟ್ ಗಳು (ಸಿಯು),ಬ್ಯಾಲಟ್ ಯೂನಿಟ್ ಗಳು (ಬಿಯು) ಮತ್ತು ವಿವಿಪ್ಯಾಟ್ ಗಳನ್ನು ಮೀಸಲಿರಿಸಬೇಕಾಗುತ್ತದೆ ಎಂದು ಆಯೋಗವು ಕಳೆದ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿತ್ತು.
ಒಂದು ಇವಿಎಂ ಕನಿಷ್ಠ ಒಂದು ಸಿಯು, ಒಂದು ಬಿಯು ಮತ್ತು ಒಂದು ವಿವಿಪ್ಯಾಟ್ ಅನ್ನು ಒಳಗೊಂಡಿರುತ್ತದೆ. ವಿವಿಧ ಅಂಶಗಳನ್ನು ಪರಿಗಣಿಸಿ ಏಕಕಾಲಿಕ ಚುನಾವಣೆಗಳನ್ನು ನಡೆಸಲು ಕನಿಷ್ಠ 46,75,100 ಬಿಯುಗಳು, 33,63,300 ಸಿಯುಗಳು ಮತ್ತು 36,62,600 ವಿವಿಪ್ಯಾಟ್ ಗಳು ಅಗತ್ಯವಾಗುತ್ತವೆ ಎಂದು ಆಯೋಗವು ತನ್ನ ಪತ್ರದಲ್ಲಿ ತಿಳಿಸಿದೆ.
ಏಕಕಾಲಿಕ ಚುನಾವಣೆಗಳ ಕುರಿತು ಕಾನೂನು ಸಚಿವಾಲಯವು ಕಳುಹಿಸಿದ್ದ ಪ್ರಶ್ನಾವಳಿಗೆ ಉತ್ತರಿಸಿದ್ದ ಆಯೋಗವು, 2023ರ ಆರಂಭದಲ್ಲಿ ಇವಿಎಮನ್ನು ತಾತ್ಕಾಲಿಕ ವೆಚ್ಚವು ಪ್ರತಿ ಬಿಯುಗೆ 7,900 ರೂ., ಪ್ರತಿ ಸಿಯುಗೆ 9,800 ರೂ. ಮತ್ತು ಪ್ರತಿ ವಿವಿಪ್ಯಾಟ್ ಗೆ 16,000 ರೂ.ಗಳಾಗಿವೆ ಎಂದು ತಿಳಿಸಿತ್ತು.
ಏಕಕಾಲಿಕ ಚುನಾವಣೆಗಳಿಗಾಗಿ ಹೆಚ್ಚುವರಿ ಮತಗಟ್ಟೆ ಮತ್ತು ಭದ್ರತಾ ಸಿಬ್ಬಂದಿಗಳು,ಇವಿಎಮ್ ಗಳಿಗಾಗಿ ಹೆಚ್ಚಿನ ಸಂಗ್ರಹ ಸೌಲಭ್ಯಗಳು ಮತ್ತು ಹೆಚ್ಚಿನ ವಾಹನಗಳ ಅಗತ್ಯಕ್ಕೂ ಆಯೋಗವು ಒತ್ತು ನೀಡಿದೆ.
ಹೊಸ ಯಂತ್ರಗಳ ಉತ್ಪಾದನೆ, ಹೆಚ್ಚಿನ ಸಂಗ್ರಹ ಸೌಲಭ್ಯಗಳು ಮತ್ತು ಇತರ ಲಾಜಿಸ್ಟಿಕ್ಸ್ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಏಕಕಾಲಿಕ ಚುನಾವಣೆಗಳನ್ನು 2029ರಲ್ಲಷ್ಟೇ ನಡೆಸಲು ಸಾಧ್ಯ ಎಂದು ಆಯೋಗವು ತಿಳಿಸಿದೆ. ಏಕಕಾಲಿಕ ಚುನಾವಣೆಗಳನ್ನು ನಡೆಸಲು ಸಂವಿಧಾನದ ಐದು ವಿಧಿಗಳಿಗೆ ತಿದ್ದುಪಡಿಗಳು ಅಗತ್ಯವಾಗುತ್ತವೆ ಎಂದೂ ಅದು ಹೇಳಿದೆ.