ʼಮ್ಯಾಟ್ರಿಮೋನಿʼ ಮೂಲಕ ಪರಿಚಯ ಮಾಡಿಕೊಂಡು 20 ಮಹಿಳೆಯರಿಗೆ ವಂಚನೆ: ಪದವೀಧರನ ಬಂಧನ
Screengrab: X/@Delhiite_
ಹೊಸದಿಲ್ಲಿ: ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರೀತಿಯ ಹೆಸರಿಲ್ಲಿ ಮೋಸ, ದುಬಾರಿ ವಸ್ತುಗಳನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಹುಲ್ ಚತುರ್ವೇದಿ ಬಂಧಿತ ಆರೋಪಿ. ಪದವೀಧರನಾಗಿರುವ ಈತನನ್ನು ಬಿಸ್ರಖ್ ಪೊಲೀಸರು ಬಂಧಿಸಿದ್ದಾರೆ.
ಲಕ್ನೋ ನಿವಾಸಿಯಾಗಿರುವ ರಾಹುಲ್ ಚತುರ್ವೇದಿ ತನ್ನ ವಂಚನೆಯ ಜಾಲಕ್ಕೆ ಮಹಿಳೆಯರನ್ನು ಬೀಳಿಸಿದ ನಂತರ ಅವರಿಂದ ಹಣ ಮತ್ತು ದುಬಾರಿ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ಬಯಲಾಗಿದೆ.
ರಾಹುಲ್ ಚತುರ್ವೇದಿ ಮ್ಯಾಟ್ರಿಮೋನಿ ಸೈಟ್ಗಳಾದ 'Jeevansathi.com' ಮತ್ತು 'Better Half' ನಲ್ಲಿ ವಿವಿಧ ಹೆಸರುಗಳಲ್ಲಿ ನಕಲಿ ಪ್ರೊಫೈಲ್ ಗಳನ್ನು ರಚಿಸಿದ್ದಾನೆ. ಈ ಖಾತೆಗಳ ಮೂಲಕ ಆತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ.
ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರ ಪೋನ್ ನಂಬರ್ ತೆಗೆದುಕೊಳ್ಳುತ್ತಿದ್ದ. ಬಳಿಕ ಕರೆ ಮಾಡಿ ಪ್ರೇಮದ ನಾಟಕವಾಡಿ ಮದುವೆಯಾಗುವ ಭರವಸೆ ನೀಡುತ್ತಿದ್ದ. ಕೊನೆಗೆ ಮಹಿಳೆಯರಿಂದ ಹಣ, ಐಫೋನ್ ಸೇರಿದಂತೆ ಬೆಲೆ ಬಾಳುವ ಮೊಬೈಲ್ ಫೋನ್ ಗಳು, ದುಬಾರಿ ವಸ್ತುಗಳನ್ನು ಸುಲಿಗೆ ಮಾಡಿ ನಂಬರ್ ಬ್ಲಾಕ್ ಮಾಡುತ್ತಿದ್ದ ಎನ್ನವುದು ತನಿಖೆಯ ವೇಳೆ ಬಯಲಾಗಿದೆ.
ಚತುರ್ವೇದಿ ತನಗೆ 2 ಲಕ್ಷ ರೂ. ವಂಚಿಸಿದ್ದಾನೆ ಮತ್ತು ನನ್ನ ಐಫೋನ್ ತೆಗೆದುಕೊಂಡು ಪರಾರಿಯಾಗಿದ್ದಾನೆಂದು ಸಂತ್ರಸ್ತೆ ಮಹಿಳೆಯೋರ್ವರು ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರನ್ನು ಆಧರಿಸಿ ಪೊಲೀಸರು ಚತುರ್ವೇದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ, ಈ ವೇಳೆ ತಾನು 20 ಮಹಿಳೆಯರಿಗೆ ವಂಚಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ತಾನು ವಿಪ್ರೋ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆಂದು ಸುಳ್ಳು ಹೇಳುತ್ತಿದ್ದ ಈತ ವಿಪ್ರೊ ಕಂಪನಿಯ ನಕಲಿ ಸ್ಯಾಲರಿ ಚೀಟಿಗಳನ್ನು ಕೂಡ ಸೃಷ್ಟಿಸಿದ್ದ.
ಮಹಿಳೆಯರಿಗೆ ವಂಚಿಸಿದ ಬಳಿಕ ಅವರ ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿ ಪರಾರಿಯಾಗುತ್ತಿದ್ದ ರಾಹುಲ್ ಚತುರ್ವೇದಿ 35ರ ಹರೆಯದ ಮಹಿಳೆಯರನ್ನು ಹೆಚ್ಚಾಗಿ ಗುರಿ ಮಾಡುತ್ತಿದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ.