ಗುರುವನ್ನು ನಿಂದಿಸಿದ ಐಐಟಿಯನ್ ಬಾಬಾ; ಜುನಾ ಅಖಾರಾದಿಂದ ಉಚ್ಚಾಟನೆ

ಅಭಯ್ ಸಿಂಗ್ ಅಲಿಯಾಸ್ ಐಐಟಿಯನ್ ಬಾಬಾ PC: x.com/timesofindia
ಪ್ರಯಾಗ್ರಾಜ್: ಬಾಹ್ಯಾಕಾಶ ಎಂಜಿನಿಯರ್ ಆಗಿದ್ದು ಬಳಿಕ ಸನ್ಯಾಸ ಸ್ವೀಕರಿಸಿದ್ದ ಅಭಯ್ ಸಿಂಗ್ ಅಲಿಯಾಸ್ ಐಐಟಿಯನ್ ಬಾಬಾ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಹಾ ಕುಂಭ ಮೇಳದ ಜುನಾ ಅಖಾರಾದಿಂದ ಉಚ್ಚಾಟಿಸಲಾಗಿದೆ.
ಶಿಸ್ತು ಮತ್ತು ಗುರುವಿನ ಬಗೆಗಿನ ಭಕ್ತಿ ಇಲ್ಲಿ ಸರ್ವೋಚ್ಛ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಯಾರೂ ಸನ್ಯಾಸಿಯಾಗಿ ಉಳಿಯಲು ಸಾಧ್ಯವಿಲ್ಲ. "ಅಭಯ್ ಸಿಂಗ್ ಕ್ರಮ ಗುರು-ಶಿಷ್ಯ ಪರಂಪರೆಗೆ ವಿರುದ್ಧವಾದದ್ದು. ತಮ್ಮ ಗುರುವನ್ನು ಅಗೌರವಿಸುವ ಮೂಲಕ ಅಖಾರಾ ಅಥವಾ ಸನಾತನ ಧರ್ಮದ ಬಗ್ಗೆ ಅವರಿಗೆ ಗೌರವ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ" ಎಂದು ಜುನಾ ಅಖಾರಾ ಮುಖ್ಯ ಪೋಷಕ ಮಹಾಂತ ಹರಿ ಗಿರಿ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸಿಂಗ್ ತಮ್ಮ ತಂದೆಯನ್ನು ಹಿರಣ್ಯಕಶಿಪು ಹಾಗೂ ಗುರುವನ್ನು ಮರಿವಿಕಲ್ಪ (ಬುದ್ಧಿಗೇಡಿ) ಎಂದು ರೀಲ್ನಲ್ಲಿ ಕರೆದಿರುವುದು ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ವಿವಾದಿತ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಅಖಾರಾದಿಂದ ಕೇಳಿಬಂದಿತ್ತು. ತಮ್ಮ ಅಖಾರಾ ತೊರೆಯುವಂತೆ ಗುರು ನೀಡಿದ ಆದೇಶದ ಹಿನ್ನೆಲೆಯಲ್ಲಿ ಐಐಟಿಯನ್ ಬಾಬಾ ಮತ್ತೊಬ್ಬ ಸ್ವಾಮೀಜಿಯವರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.