ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು: ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಮತ್ತೆ 5 ಎಫ್‌ಐಆರ್, ಇಬ್ಬರ ಬಂಧನ

ಚಂಡೀಗಢ: ಮಾನವ ಕಳ್ಳಸಾಗಣೆ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಪಂಜಾಬ್‌ನಿಂದ ವಿದೇಶಗಳಿಗೆ ಅಕ್ರಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಮತ್ತೆ ಐದು ಎಫ್‌ಐಆರ್‌ಗಳು ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಫೆಬ್ರವರಿ 17 ಮತ್ತು 18 ರಂದು ತರ್ಣ್ ತರಣ್, ಎಸ್‌ಎಎಸ್ ನಗರ್, ಮೋಗಾ ಮತ್ತು ಸಂಗ್ರೂರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಇಬ್ಬರು ಟ್ರಾವೆಲ್ ಏಜೆಂಟ್‌ಗಳಾದ ಅಂಗ್ರೇಜ್ ಸಿಂಗ್ ಮತ್ತು ಜಗಜಿತ್ ಸಿಂಗ್ ಅವರನ್ನು ಸಂಗ್ರೂರ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 15 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಒಟ್ಟು ಮೂವರನ್ನು ಬಂಧಿಸಲಾಗಿದೆ.
ಫೆಬ್ರವರಿ 5 ರಿಂದ ಭಾರತಕ್ಕೆ ಮೂರು ಅಕ್ರಮ ವಲಸಿಗರನ್ನು ಹೊತ್ತ ವಿಮಾನಗಳು ಬಂದಿವೆ. ಗಡಿಪಾರಾಗಿರುವ ಕಳುಹಿಸಲಾದ 333 ಭಾರತೀಯ ಅಕ್ರಮ ವಲಸಿಗರಲ್ಲಿ ಪಂಜಾಬ್ ನಿವಾಸಿಗಳು 126 ಮಂದಿ ಇದ್ದಾರೆ. ಉಳಿದಂತೆ ನಂತರ ನೆರೆಯ ಹರಿಯಾಣದಿಂದ 110 ಮತ್ತು ಗುಜರಾತ್‌ನಿಂದ 74 ಮಂದಿ ಸೇರಿದ್ದಾರೆ.
ಅಧಿಕಾರಿಗಳ ಪ್ರಕಾರ, ಅನಧಿಕೃತ ಜಾಲಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಆರೋಪಿಗಳು, ಸುರಕ್ಷಿತ ಮತ್ತು ಕಾನೂನುಬದ್ಧ ವಲಸೆ ಮಾರ್ಗಗಳ ಭರವಸೆ ನೀಡುವ ಮೂಲಕ ಸಂತ್ರಸ್ತರಿಂದ ಭಾರಿ ಮೊತ್ತವನ್ನು ಪಡೆದಿರುವುದು ಕಂಡುಬಂದಿದೆ. ಆದರೆ ಅವರರನ್ನು ಡಂಕಿ ಮಾರ್ಗದ ಮೂಲಕ ಪ್ರಯಾಣಿಸುವಂತೆ ಮಾಡಿ ಅಮಾನವೀಯ ಪರಿಸ್ಥಿತಿಗಳನ್ನು ಎದುರಿಸುವಂತೆ ಮಾಡಿದ್ದಾರೆ. ಅಂತಿಮವಾಗಿ ವಲಸಿಗರ ಬಂಧನ ನಡೆದು, ಅಂತಿಮವಾಗಿ ಗಡಿಪಾರು ಮಾಡಲಾಗಿದೆ.
ಚಂಡೀಗಢ ಮತ್ತು ಯಮುನಾ ನಗರದಿಂದ ಕಾರ್ಯನಿರ್ವಹಿಸುತ್ತಿರುವ ಏಜೆಂಟ್ ವಿರುದ್ಧ ತರ್ಣ್ ತರಣ್ ಪಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಒಂದರಲ್ಲಿ, ಕಾನೂನುಬದ್ಧವಾಗಿ ಅಮೆರಿಕಕ್ಕೆ ವಲಸೆಯನ್ನು ಸುಗಮಗೊಳಿಸುವುದಾಗಿ ಭರವಸೆ ನೀಡಿ ಸಂತ್ರಸ್ತರಿಂದ 44 ಲಕ್ಷ ರೂ.ಗಳನ್ನು ಪಡೆಯಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಆದರೆ ಬಳಿಕ ನಿಕರಾಗುವಾ ಮತ್ತು ಮೆಕ್ಸಿಕೊ ಮೂಲಕ ಅಮೆರಿಕ ಪ್ರವೇಶ ಮಾಡಿಸಲಾಗಿದೆ ಎನ್ನಲಾಗಿದೆ.
ಏಜೆಂಟರಾದ ಮುಕುಲ್ ಮತ್ತು ಗುರ್ಜಿಂದರ್ ಅಂಟಾಲ್ ವಿರುದ್ಧ ಎಸ್‌ಎಎಸ್ ನಗರದ ಮಜ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಎಫ್‌ಐಆರ್‌ನಲ್ಲಿ, ಸಂತ್ರಸ್ತರಿಂದ 45 ಲಕ್ಷ ರೂ.ಗಳನ್ನು ಪಡೆದು ಕೊಲಂಬಿಯಾ ಮತ್ತು ಮೆಕ್ಸಿಕೊ ಮೂಲಕ ಅಮೆರಿಕದ ಗಡಿಗಳಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ಮೋಗಾದ ಧರಮ್‌ಕೋಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಎಫ್‌ಐಆರ್‌ನಲ್ಲಿ, ಚಂಡೀಗಢದ ಏಕಮ್ ಟ್ರಾವೆಲ್ಸ್‌ನ ಸುಖ್ವಿಂದರ್ ಸಿಂಗ್, ತಲ್ವಿಂದರ್ ಸಿಂಗ್, ಪ್ರೀತಮ್ ಕೌರ್, ಗುರುಪ್ರೀತ್ ಸಿಂಗ್ ಅಮೆರಿಕಕ್ಕೆ ನೇರ ವಿಮಾನದ ಅಮಿಷವೊಡ್ಡಿ ಸುಳ್ಳು ಕೆಲಸದ ಪರವಾನಗಿ ನೀಡಿ 45 ಲಕ್ಷ ರೂ. ಪೀಕಿಸಿದ್ದರು ಎನ್ನಲಾಗಿದೆ. ಬಳಿಕ ಪ್ರೇಗ್, ಸ್ಪೇನ್ ಮತ್ತು ಎಲ್ ಸಾಲ್ವಡಾರ್ ಮೂಲಕ ಕಳುಹಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಮಾನವ ಕಳ್ಳಸಾಗಣೆದಾರರ ಸಂಪೂರ್ಣ ಜಾಲದ ಗುರುತುಗಳನ್ನುಪತ್ತೆಹಚ್ಚಲು ಪಂಜಾಬ್ ಪೊಲೀಸರ ವಿಶೇಷ ತನಿಖಾ ತಂಡವು, ಸೈಬರ್ ಅಪರಾಧ ಘಟಕಗಳು, ಹಣಕಾಸು ಅಧಿಕಾರಿಗಳು ಮತ್ತು ಕೇಂದ್ರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿದೆ.
ಸಂತ್ರಸ್ತರು ಮುಂದೆ ಬರಬೇಕು. ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಂಚನೆ ಜಾಲವನ್ನು ನಿರ್ಮೂಲನೆ ಮಾಡಲು ಪಂಜಾಬ್ ಪೊಲೀಸರು ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಪುನರುಚ್ಚರಿಸಿದ್ದಾರೆ.