ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿಕೆಶಿ ಹೂಡಿಕೆಗಳ ವಿವರಗಳನ್ನು ಕೋರಿ ಜೈಹಿಂದ್ ಚಾನೆಲ್ ಗೆ ಸಿಬಿಐ ನೋಟಿಸ್
ಡಿ.ಕೆ.ಶಿವಕುಮಾರ್ | Photo: PTI
ಹೊಸದಿಲ್ಲಿ : ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾಡಿರುವ ಹೂಡಿಕೆಗಳ ವಿವರಗಳನ್ನು ನೀಡುವಂತೆ ಕೇರಳ ಮೂಲದ ಜೈಹಿಂದ್ ಚಾನೆಲ್ ಗೆ ಸಿಬಿಐ ನೋಟಿಸನ್ನು ಹೊರಡಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐನ ಬೆಂಗಳೂರು ಕಚೇರಿಯು ತನಿಖಾಧಿಕಾರಿಯು ಕೋರಿರುವ ಎಲ್ಲ ಅಗತ್ಯ ದಾಖಲೆಗಳೊಂದಿಗೆ 2024, ಜ.11ರಂದು ತನ್ನ ಮುಂದೆ ಹಾಜರಾಗುವಂತೆ ಜೈಹಿಂದ್ ಚಾನೆಲ್ ನ ಆಡಳಿತ ನಿರ್ದೇಶಕರಿಗೆ ಸೂಚಿಸಿದೆ.
ಸಿಆರ್ಪಿಸಿಯ ಕಲಂ 91ರಡಿ ಹೊರಡಿಸಿರುವ ನೋಟಿಸ್ ನಲ್ಲಿ ಸಿಬಿಐ, ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಮಾಡಿರುವ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಶೇರು ವಹಿವಾಟುಗಳು, ಹಣಕಾಸು ವಹಿವಾಟುಗಳ ಜೊತೆಗೆ ಅವುಗಳನ್ನು ನಡೆಸಿದ ಬ್ಯಾಂಕುಗಳು, ಅವರ ಹಿಡುವಳಿಗಳು, ಲೆಡ್ಜರ್ ಖಾತೆಗಳು, ಕಾಂಟ್ರಾಕ್ಟ್ ನೋಟ್ ಗಳು ಇತ್ಯಾದಿಗಳ ವಿವರಗಳನ್ನು ಒದಗಿಸುವಂತೆ ಚಾನೆಲಿಗೆ ಸೂಚಿಸಿದೆ.