ಪ್ರಯಾಣಿಕ ವಿಮಾನಗಳಲ್ಲಿ ಹೆಚ್ಚುತ್ತಿರುವ ಜಿಪಿಎಸ್ ಹಸ್ತಕ್ಷೇಪ
ಶೇ.10ರಷ್ಟು ಯಾನಗಳಿಗೆ ಭಾರತದ ಗಡಿಗಳ ಮೇಲೆ ಪಥದರ್ಶನದಲ್ಲಿ ನಿಖರತೆ ಕೊರತೆ
PC : freepik.com
ಹೊಸದಿಲ್ಲಿ: ಪಾಕಿಸ್ತಾನದೊಂದಿಗಿನ ಭಾರತದ ಗಡಿಗಳು ಒಳಗೊಂಡಂತೆ ಜಾಗತಿಕವಾಗಿ ಸಂಘರ್ಷ ವಲಯಗಳಲ್ಲಿ ಸುಳ್ಳು ಸಂಕೇತಗಳೊಂದಿಗೆ ‘ಸ್ಪೂಫಿಂಗ್’ ಸೇರಿದಂತೆ ಪ್ರಯಾಣಿಕ ವಿಮಾನಗಳಲ್ಲಿ ಜಿಪಿಎಸ್ ಹಸ್ತಕ್ಷೇಪದ ನಿದರ್ಶನಗಳು ಹೆಚ್ಚುತ್ತಿವೆ ಎಂದು OPSGROUP ವರದಿ ಮಾಡಿದೆ.
ಇದು ಪೈಲಟ್ಗಳು ಸೇರಿದಂತೆ 8,000 ವಾಯುಯಾನ ಸಿಬ್ಬಂದಿಗಳ ಸ್ವಯಂಸೇವಾ ಗುಂಪಾಗಿದ್ದು, ಅವರು ವಿಮಾನಯಾನಗಳಿಗೆ ಅಪಾಯಗಳ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. GPSjam ಪೋರ್ಟಲ್ನಲ್ಲಿ ಪಟ್ಟಿ ಮಾಡಲಾಗಿರುವ ಶೇ.10ಕ್ಕಿಂತ ಹೆಚ್ಚು ವಿಮಾನಗಳು ಕಡಿಮೆ ಪಥದರ್ಶನ ನಿಖರತೆಯನ್ನು ವರದಿ ಮಾಡುವ ಅಗ್ರ ಐದು ಪ್ರದೇಶಗಳಲ್ಲಿ ಪಾಕಿಸ್ತಾನ ಮತ್ತು ಮ್ಯಾನ್ಮಾರ್ನೊಂದಿಗೆ ಭಾರತದ ಗಡಿಗಳೂ ಸೇರಿವೆ.
‘ಸ್ಪೂಫಿಂಗ್’ ಸೈಬರ್ ದಾಳಿಯ ಒಂದು ರೂಪವಾಗಿದ್ದು, ಪಥದರ್ಶನ ಉಪಕರಣಗಳನ್ನು ದಾರಿ ತಪ್ಪಿಸುವ ಸುಳ್ಳು ಸಂಕೇತಗಳನ್ನು ಒಳಗೊಂಡಿರುತ್ತದೆ. ಇದು ಸಂಘರ್ಷ ವಲಯಗಳಲ್ಲಿ ಕಂಡು ಬರುತ್ತಿದ್ದು, ಆಧುನಿಕ ಯುದ್ಧದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಡ್ರೋನ್ಗಳ ಮೇಲೆ ದಾಳಿಗಳನ್ನು ನಡೆಸಲು ಇದನ್ನು ಬಳಸಲಾಗುತ್ತಿದೆ. ಡಿ.25ರಂದು 38 ಜನರನ್ನು ಬಲಿ ತೆಗೆದುಕೊಂಡ ಅಜರ್ಬೈಜಾನ್ ಏರ್ಲೈನ್ಸ್ನ ಎಂಬ್ರೇಯರ್ ವಿಮಾನದ ಪತನಕ್ಕೆ ಅದರ ಜಿಪಿಎಸ್ ಉಪಕರಣದಲ್ಲಿ ಹಸ್ತಕ್ಷೇಪವು ಕಾರಣವಾಗಿತ್ತು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿ.28ರಂದು ‘ತನ್ನ ದೇಶದ ವಾಯುಪ್ರದೇಶದಲ್ಲಿ’ ಸಂಭವಿಸಿದ ದುರಂತಕ್ಕಾಗಿ ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರ ಬಳಿ ಕ್ಷಮೆ ಯಾಚಿಸಿದ್ದು,ರಶ್ಯಾದ ವಾಯು ರಕ್ಷಣಾ ಪಡೆಯು ದೇಶದ ಪಟ್ಟಣಗಳ ಮೇಲೆ ಉಕ್ರೇನ್ನ ಯುದ್ಧ ಡ್ರೋನ್ಗಳಿಂದ ದಾಳಿಗಳನ್ನು ಹಿಮ್ಮೆಟ್ಟಿಸುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
OPSGROUP ಸೆಪ್ಟೆಂಬರ್ 2024ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಸೆಪ್ಟಂಬರ್ 2023ರಲ್ಲಿ ಬಾಗ್ದಾದ್ ಅನ್ನು ಕೇಂದ್ರೀಕರಿಸಿಕೊಂಡು ಉತ್ತರ ಇರಾಕ್ ಪ್ರದೇಶದಲ್ಲಿ ಮೊದಲ ಜಿಪಿಎಸ್ ಸ್ಪೂಫಿಂಗ್ ಸರಣಿಯನ್ನು ಗುರುತಿಸಲಾಗಿತ್ತು. 2024ರಲ್ಲಿ ಕಪ್ಪು ಸಮುದ್ರಪ್ರದೇಶ, ಪಶ್ಚಿಮ ರಶ್ಯಾಮತ್ತು ಬಾಲ್ಟಿಕ್ಸ್,ಉತ್ತರ ಮತ್ತು ದಕ್ಷಿಣ ಕೊರಿಯಾ ಗಡಿಗಳು, ಪಶ್ಚಿಮ ಉಕ್ರೇನ್ ಮತ್ತು ಭಾರತ-ಪಾಕಿಸ್ತಾನ ಗಡಿಗಳಲ್ಲಿ ಹೊಸ ಸ್ಪೂಫಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.
ದಿಲ್ಲಿ ವಿಮಾನಯಾನ ಮಾಹಿತಿ ವಲಯದಲ್ಲಿ ಮೇ 2024ರಿಂದ ಪ್ರತಿ ದಿನ ಸ್ಪೂಫಿಂಗ್ ಸಂಭವಿಸುತ್ತಿದೆ ಎಂದು ಹೇಳಿರುವ ವರದಿಯು, ಜು.15ರಿಂದ ಆ.15ರ ನಡುವೆ 316 ವಿಮಾನಗಳು ಸ್ಪೂಫಿಂಗ್ನಿಂದ ಪ್ರಭಾವಿತಗೊಂಡಿದ್ದ ಈ ಪ್ರದೇಶವನ್ನು ಉನ್ನತ 20 ವಿಮಾನಯಾನ ಮಾಹಿತಿ ವಲಯಗಳ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿರಿಸಿದೆ. ಶ್ರೇಣಿಯು 17,000 ವಿಮಾನಯಾನಗಳ ವಿಶ್ಲೇಷಣೆಯನ್ನು ಆಧರಿಸಿದೆ.
ಜಾಗತಿಕವಾಗಿ ಜನವರಿಯಲ್ಲಿ ಪ್ರತಿ ದಿನ 300 ವಿಮಾನಯಾನಗಳು ಸ್ಪೂಫಿಂಗ್ನಿಂದ ಪ್ರಭಾವಿತಗೊಂಡಿದ್ದರೆ ಆಗಸ್ಟ್ ನಲ್ಲಿ ಈ ಸಂಖ್ಯೆ 1,500ಕ್ಕೇರಿದೆ ಎಂದು ವರದಿಯು ತಿಳಿಸಿದೆ.
ನವಂಬರ್ 2023ರಲ್ಲಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸುವಂತೆ ಮತ್ತು ಸ್ಪೂಫಿಂಗ್ ಘಟನೆಗಳ ಕುರಿತು ದ್ವೈಮಾಸಿಕ ವರದಿಗಳನ್ನು ಸಲ್ಲಿಸುವಂತೆ ವಾಯುಯಾನ ಸಂಸ್ಥೆಗಳಿಗೆ ಸೂಚಿಸಿತ್ತು.ಈ ಡೇಟಾವು ಸಾರ್ವಜನಿಕವಾಗಿ ಲಭ್ಯವಿಲ್ಲ.
ಅಮೃತಸರದಿಂದ ನಿರ್ಗಮಿಸುವ ಮತ್ತು ಆಗಮಿಸುವ ಹೆಚ್ಚು ಕಡಿಮೆ ಪ್ರತಿ ವಿಮಾನಯಾನವೂ ಸ್ಪೂಫಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹಲವಾರು ಪೈಲಟ್ಗಳು ಹೇಳಿದ್ದಾರೆ. ಭಾರತದ ಉತ್ತರ ಭಾಗಗಳಿಂದ ದುಬೈ,ದೋಹಾ ಮತ್ತು ಇತರ ಕೊಲ್ಲಿ ದೇಶಗಳಿಗೆ ಸಂಚರಿಸುವ ವಿಮಾನಗಳೂ ಸುಳ್ಳು ಜಿಪಿಎಸ್ ಸಂಕೇತಗಳಿಗೆ ತುತ್ತಾಗುತ್ತಿವೆ.
ಬ್ಯಾಂಕಾಂಕ್, ವಿಯೆಟ್ನಾಂ ಮತ್ತು ಹಾಂಗ್ಕಾಂಗ್ಗಳಿಗೆ ಯಾನಗಳಿಗೂ ಮ್ಯಾನ್ಮಾರ್ ದಾಟುವಾಗ ಇದೇ ಸಮಸ್ಯೆ ಎದುರಾಗುತ್ತಿದೆ.
ಜಿಪಿಎಸ್ ಸ್ಪೂಫಿಂಗ್ ವಿಮಾನದ ವೇಗವನ್ನು ತೋರಿಸುವ ಉಪಕರಣಗಳಲ್ಲಿಯೂ ತಪ್ಪುಗಳಿಗೆ ಕಾರಣವಾಗಬಲ್ಲುದು ಅಥವಾ ಪಥದರ್ಶಕ ವ್ಯವಸ್ಥೆಯನ್ನು ವಂಚಿಸುವ ಮೂಲಕ ವಿಮಾನವು ಅಪಾಯಕಾರಿಯಾಗಿ ಕಡಿಮೆ ಎತ್ತರದಲ್ಲಿ ಹಾರುತ್ತಿದೆ ಅಥವಾ ಭೂಮಿಗೆ ಸಮೀಪದಲ್ಲಿದೆ ಎಂದು ನಂಬುವಂತೆ ಮಾಡಿ ಭೂಪ್ರದೇಶ ಸಾಮೀಪ್ಯದ ಎಚ್ಚರಿಕೆಗೆ ಕಾರಣವಾಗಬಹುದು.
ಸ್ಪೂಫಿಂಗ್ ಸಂದರ್ಭದಲ್ಲಿ ಪೈಲಟ್ಗಳು ಕಾಕ್ಪಿಟ್ನಲ್ಲಿ ಯಾವುದೇ ಎಚ್ಚರಿಕೆಯನ್ನು ಸ್ವೀಕರಿಸುವುದಿಲ್ಲವಾದರೂ ವಿವಿಧ ಉಪಕರಣಗಳು ತೋರಿಸುವ ‘ಅಸಂಬದ್ಧ’ ಮಾಹಿತಿಗಳಿಂದ ಸ್ಪೂಫಿಂಗ್ನ್ನು ಪತ್ತೆ ಹಚ್ಚಲು ಸಿಬ್ಬಂದಿಗಳಿಗೆ ಸಾಧ್ಯವಾಗುತ್ತದೆ.