ಸ್ವಾತಂತ್ರ್ಯದಿನದ ಧ್ವಜಾರೋಹಣ | ಅತಿಶಿ ಬದಲಿಗೆ ಕೈಲಾಶ್ ಗೆಹ್ಲೋಟ್ ರನ್ನು ಆಯ್ಕೆ ಮಾಡಿದ ಲೆಫ್ಟಿನೆಂಟ್ ಗವರ್ನರ್
ಅತಿಶಿ , ಕೈಲಾಶ್ ಗೆಹ್ಲೋಟ್ | PTI
ಹೊಸದಿಲ್ಲಿ : ದಿಲ್ಲಿಯ ಆಪ್ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಮತ್ತೆ ಸಂಘರ್ಷದ ಕಿಡಿ ಹೊತ್ತಿಕೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಶಿ ಅವರಿಗೆ ಧ್ವಜಾರೋಹಣಗೈಯಲು ಅವಕಾಶ ನೀಡಬೇಕೆಂಬ ದಿಲ್ಲಿ ಸರಕಾರದ ಸೂಚನೆಯನ್ನು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ್ದಾರೆ. ಬದಲಿಗೆ ದಿಲ್ಲಿಯ ಗೃಹ ಸಚಿವ ಕೈಲಾಶ್ ಗೆಹ್ಲೋಟ್ ಅವರನ್ನು ಧ್ವಜಾರೋಹಣಕ್ಕೆ ನಿಯೋಜಿಸಿದ್ದಾರೆ.
ದಿಲ್ಲಿಯ ಶಿಕ್ಷಣ ಸಚಿವೆ ಅತಿಶಿ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಏರ್ಪಾಡುಗಳನ್ನು ಮಾಡುವಂತೆ ಸಚಿವ ಗೋಪಾಲ್ ರಾಯ್ ಅವರ ನಿರ್ದೇಶವನ್ನು ಪಾಲಿಸಲು ದಿಲ್ಲಿ ಸರಕಾರದ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ನಿರಾಕರಿಸಿದ ಕೆಲವೇ ತಾಸುಗಳ ಬಳಿಕ ಈ ಬೆಳವಣಿಗೆಯುಂಟಾಗಿದೆ.
ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರಧ್ವಜವನ್ನು ಅರಳಿಸುವುದಕ್ಕೆ ಗೃಹ ಸಚಿವ ಕೈಲಾಶ್ ಗೆಹ್ಲೋಟ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನಗೊಳಿಸಿದ್ದಾರೆ. ಆ ಪ್ರಕಾರ ಅಗತ್ಯ ಏರ್ಪಾಡುಗಳನ್ನು ಮಾಡಬೇಕಾಗಿದೆ’’ ಎಂದು ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯದರ್ಶಿ ಆಶೀಶ್ ಕುಂದ್ರಾ ಅವರು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಬರೆದಿರುವ ಲಿಖಿತ ಸಂಹವನದಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಶಿ ಸೇರಿದಂತೆ ದಿಲ್ಲಿ ಸರಕಾರದ ಹಲವಾರು ಹಿರಿಯ ನಾಯಕರನ್ನು ಬದಿಗೊತ್ತುವ ಈ ನಿರ್ಧಾರವು ಆಪ್ ಹಾಗೂ ಗವರ್ನರ್ ಕಾರ್ಯಾಲಯ ನಡುವೆ ಮತ್ತೊಮ್ಮೆ ಸಂಘರ್ಷದ ಕಿಡಿಯನ್ನು ಹುಟ್ಟುಹಾಕಿದೆ.
ತನ್ನ ಅನುಪಸ್ಥಿತಿಯಲ್ಲಿ ದಿಲ್ಲಿಯಲ್ಲಿ ಅತಿಶಿ ಅವರು ತ್ರಿವರ್ಣ ಧ್ವಜ ಹಾರಿಸಬೇಕೆಂದು ನ್ಯಾಯಾಂಗ ಬಂಧನದಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಯಸಿದ್ದಾರೆಎಂದು ಆಪ್ ತಿಳಿಸಿದೆ. ಆದರೆ ಕೇಜ್ರಿವಾಲ್ ಅವರಿಂದ ಈ ಬಗ್ಗೆ ಯಾವುದೇ ಪತ್ರವು ತನಗೆ ಬಂದಿಲ್ಲವೆಂದು ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯಾಲಯ ಹೇಳಿದೆ.
ಅಲ್ಲದೆ ಮುಖ್ಯಮಂತ್ರಿಗೆ ತನ್ನ ಪರವಾಗಿ ಧ್ವಜಾರೋಹಣ ಮಾಡಲು ಅತಿಶಿಗೆ ಅಧಿಕಾರವನ್ನು ನೀಡಲು ಸಾಧ್ಯವಿಲ್ಲವೆಂದು ದಿಲ್ಲಿಯ ಸಾಮಾನ್ಯ ಆಡಳಿತ ಇಲಾಖೆ ತಿಳಿಸಿದೆ.
ದಿಲ್ಲಿ ಸರಕಾರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪುಟದ ಸಚಿವೆ ಅತಿಶಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆಂದು ಕಳೆದ ವಾರ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಕಾರಾಗೃಹದಿಂದ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆಯು ಮೂಲಕ ಕೇಜ್ರಿವಾಲ್ ಅವರು ತನಗೆ ನೀಡಲಾದ ಸವಲತ್ತುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರು ಬರೆದಿರುವ ಪತ್ರವನ್ನು ಸಂಬಂದಿತ ವಿಳಾಸಕ್ಕೆ ಕಳುಹಿಸಿಕೊಟ್ಟಿಲ್ಲವೆಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.