ಇಂಡಿಯಾ ಮೈತ್ರಿಕೂಟ ಮುಂದಿನ ಸರಕಾರ ರಚಿಸುವ ಸಾಧ್ಯತೆ ಇದೆ : ಸಿ-ಫೋರ್ ಸಂಸ್ಥಾಪಕ ಪ್ರೇಮ್ ಚಂದ್ ಪಲೇಟಿ ಭವಿಷ್ಯ
ಚುನಾವಣಾ ತಜ್ಞ ಪ್ರೇಮ್ ಚಂದ್ ಪಲೇಟಿ |PC : newindianexpress.com
ಹೊಸದಿಲ್ಲಿ: “ಇಂಡಿಯಾ ಮೈತ್ರಿಕೂಟ ಮುಂದಿನ ಸರಕಾರ ರಚಿಸುವ ಸಾಧ್ಯತೆ ಇದೆ” ಎಂದು ಪ್ರಸಿದ್ಧ ಚುನಾವಣಾ ಸಮೀಕ್ಷಾ ಸಂಸ್ಥೆಯಾದ ಸಿ-ಫೋರ್ ನ ಸಂಸ್ಥಾಪಕ ಹಾಗೂ ಚುನಾವಣಾ ತಜ್ಞ ಪ್ರೇಮ್ ಚಂದ್ ‘The New Indian Express’ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಭವಿಷ್ಯ ನುಡಿದಿದ್ದಾರೆ.
ಆ ಸಂದರ್ಶನದ ಆಯ್ದ ಭಾಗಗಳ್ನು ಇಲ್ಲಿ ನೀಡಲಾಗಿದೆ.
ಪ್ರ: ಈ ಬಗೆಯ ಬಹು ಹಂತದ ಚುನಾವಣಾ ಪ್ರಕ್ರಿಯೆಯಿಂದ ಪ್ರಧಾನಿ ಮೋದಿಯಂತಹ ಪ್ರಚಾರಕರನ್ನು ಹೊಂದಿರುವ ಆಡಳಿತ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಕೆಲವರು ಹೇಳುತ್ತಾರಲ್ಲ?
ಉ: ಬಿಜೆಪಿಯ ಪಾಲಿಗೆ ಮೋದಿ ಮತ ಸೆಳೆಯುವವರಾಗಿದ್ದಾರೆ. ಇಂತಹ ಬಹುಹಂತದ ಚುನಾವಣೆಯು ಅವರಿಗೆ ಚುನಾವಣಾ ಪ್ರಚಾರ ಮಾಡಲು ನೆರವು ನೀಡುತ್ತದೆ ಹಾಗೂ ಸಂಪನ್ಮೂಲಗಳನ್ನು ನಿಯೋಜಿಸಲೂ ಸಹಾಯ ಮಾಡುತ್ತದೆ.
ಪ್ರ: ಶೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ತಿದ್ದುಪಡಿಯಾಗಿದೆ. ಆಡಳಿತ ಪಕ್ಷಕ್ಕೆ ಈ ಹಿಂದೆ 340 ಸ್ಥಾನಗಳನ್ನು ನೀಡಿದ್ದ ಶೇರು ಮಾರುಕಟ್ಟೆಯು, ಇದೀಗ ಅದನ್ನು 280 ಸ್ಥಾನಗಳಿಗೆ ಇಳಿಸಿದೆ, ಏಕೆ?
ಉ: ಶೇರು ಮಾರುಕಟ್ಟೆಗಳು ಊಹಾತ್ಮಕವಾಗಿವೆ. ಅವು ಚುನಾವಣಾ ಸಮೀಕ್ಷಕರ ಮಾಹಿತಿಯನ್ನೂ ಅವಲಂಬಿಸಿವೆ. ನೈಜ ಕ್ಷೇತ್ರ ಕಾರ್ಯ ನಡೆಸುತ್ತಿರುವ ಚುನಾವಣಾ ಸಮೀಕ್ಷಕರಿಗೆ, ಒಂದು ತಿಂಗಳ ಹಿಂದೆ ಬಿಂಬಿಸಲಾಗಿದ್ದಷ್ಟು ಅನುಕೂಲಕರ ವಾತಾವರಣ ಬಿಜೆಪಿಗಿಲ್ಲ ಎಂದು ಅನ್ನಿಸುತ್ತಿದೆ.
ಪ್ರ: ಪ್ರಧಾನಿಯು ಸಮುದಾಯ ವಿಭಜಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ವಿರೋಧ ಪಕ್ಷಗಳು ಅಂದಾನಿ ಮತ್ತು ಅಂಬಾನಿಗಳಿಂದ ಕಪ್ಪು ಹಣ ಸ್ವೀಕರಿಸುತ್ತಿವೆ ಎಂದು ಆರೋಪಿಸುತ್ತಿದ್ದಾರೆ?
ಉ : ಇದು ಅವರು ಗಾಬರಿಗೊಂಡಿರುವುದನ್ನು ಸೂಚಿಸುತ್ತಿದೆ. ಬಹುಶಃ ಅವರು ಬಿಜೆಪಿಗೆ ಅನುಕೂಲಕರವಾಗಿಲ್ಲ ಎಂಬ ಚುನಾವಣೋತ್ತರ ಸಮೀಕ್ಷಾ ವರದಿಗಳನ್ನು ಸ್ವೀಕರಿಸಿರಬಹುದು. ಕಳೆದ ಬಾರಿ ಪುಲ್ವಾಮಾ/ಬಾಲಾಕೋಟ್ ಬಿಜೆಪಿಗೆ ನೆರವು ನೀಡಿದವು. ಈ ಚುನಾವಣೆಯಲ್ಲಿ ಅಂತಹ ವಿಷಯಗಳಿಲ್ಲದೆ ಇರುವುದರಿಂದ, ಕೆಲವು ಧಾರ್ಮಿಕ ಧ್ರುವೀಕರಣವನ್ನು ಸೃಷ್ಟಿಸಲು ಬಿಜೆಪಿ ಬಯಸುತ್ತಿದೆ.
ಪ್ರ:ಕರ್ನಾಟಕದ ಚುನಾವಣೆಗಳನ್ನು ನೀವು ಹೇಗೆ ನೋಡುತ್ತೀರಿ?
ಉ: ನಾನು ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿಲ್ಲ. ಆದರೆ, ಕಳೆದ ಚುನಾವಣೆಗಿಂತ ಈ ಬಾರಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವಂತೆ ನನಗೆ ತೋರುತ್ತಿದೆ. ಈಗ ಸ್ಪಷ್ಟವಾಗಿ ದಕ್ಷಿಣ-ಉತ್ತರ ಎಂಬ ವಿಭಜನೆಯಾಗಿದೆ. ಬಹುತೇಕ ದಕ್ಷಿಣ ಭಾರತೀಯರು ಬಿಜೆಪಿಯು ದಕ್ಷಿಣದ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದು ಭಾವಿಸಿದ್ದಾರೆ.
ಪ್ರ: ನಾಲ್ಕು ಹಂತದ ಚುನಾವಣೆಗಳು ಹೇಗೆ ನಡೆದಿವೆ? ಈ ಚುನಾವಣೆಯಲ್ಲಿ ಮೋದಿಯ ಪ್ರಾಮುಖ್ಯತೆ ಕುಗ್ಗಿದೆಯೆ?
ಉ : ಇಲ್ಲಿಯವರೆಗೆ ನಡೆದಿರುವ ನಾಲ್ಕು ಹಂತದ ಚುನಾವಣೆಗಳಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಬಹುದು. ಎನ್ಡಿಎ ಮೈತ್ರಿಕೂಟವು ಬಹುಮತದ ಗಡಿಗಿಂತ ಕೆಳಗಿಳಿಯಬಹುದು ಎಂಬ ಮಾಹಿತಿ ಇದೆ. ನಿರುದ್ಯೋಗ ಮತ್ತು ಹಣದುಬ್ಬರ ಮತದಾರರ ಪ್ರಮುಖ ಕಳವಳಗಳಾಗಿವೆ. ಹಲವಾರು ಮತದಾರರು ಹಾಲಿ ನಾಯಕತ್ವದ ಸರ್ವಾಧಿಕಾರಿಯಂಥ ಧೋರಣೆ ಹಾಗೂ ಆಯ್ದ ರಾಜಕಾರಣಿಗಳನ್ನು ಗುರಿಯಾಗಿಸಿಕೊಳ್ಳುವುದನ್ನು ಇಷ್ಟ ಪಡುತ್ತಿಲ್ಲ. ಇದು ಮೋದಿಯ ವರ್ಚಸ್ಸಿನ ಮೇಲೆ ಪ್ರಭಾವ ಬೀರಬಹುದು.
ಪ್ರ: ನಾವು ಗಮನ ಹರಿಸಬೇಕಾದ ಯಾವುದಾದರೂ ಪ್ರಮುಖ ರಾಜ್ಯಗಳಿವೆಯೆ?
ಉ: ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ಬಿಜೆಪಿಯ ಹಣೆಬರಹವನ್ನು ಬದಲಿಸಬಹುದಾದ ರಾಜ್ಯಗಳಾಗಿವೆ.
ಪ್ರ: ಸಿದ್ದರಾಮಯ್ಯನವರ 5 ಗ್ಯಾರಂಟಿಗಳು ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಪೆನ್ ಡ್ರೈವ್ ಆರೋಪವು ಎಷ್ಟು ದೊಡ್ಡ ಪರಿಣಾಮವನ್ನುಂಟು ಮಾಡಲಿದೆ?
ಉ: ಸಿದ್ದರಾಮಯ್ಯನವರ ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಪಾಲಿಗೆ ಸಕಾರಾತ್ಮಕ ಪರಿಣಾಮ ಬೀರಿವೆ. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇನಾದರೂ ಉತ್ತಮ ಸಾಧನೆ ಮಾಡಿದರೆ, ಅದಕ್ಕೆ ಅದೂ ಕೂಡಾ ಪ್ರಮುಖ ಕಾರಣ. ಚುನಾವಣೆಗೂ ಪ್ರಜ್ವಲ್ ಪ್ರಕರಣವು ಇನ್ನೂ ಕೆಲ ದಿನಗಳ ಮುಂಚಿತವಾಗಿಯೇ ಹೊರ ಬಂದಿದ್ದರೆ, ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದ ಪ್ರಥಮ ಹಂತದ ಚುನಾವಣೆಯ ಮೇಲೆ ಭಾರಿ ಪರಿಣಾಮವುಂಟಾಗುತ್ತಿತ್ತು. ಎರಡನೆ ಹಂತದ ಚುನಾವಣೆಯ ಮೇಲೆ ಇದರ ಪರಿಣಾಮ ಕೊಂಚ ಮಟ್ಟಿಗೆ ಇರಲಿದೆ.
ಪ್ರ: ಮಹಾರಾಷ್ಟ್ರವನ್ನು ಪ್ರಮುಖ ತಿರುವು ನೀಡುವ ರಾಜ್ಯವನ್ನಾಗಿ ನೋಡಲಾಗುತ್ತಿದೆ. ಉದ್ಧವ್ ಠಾಕ್ರೆಯವರ ಶಿವಸೇನೆ ಹಾಗೂ ಶರದ್ ಪವಾರ್ ಅವರ ಎನ್ಸಿಪಿಯ ಪರ ಸಂಭವನೀಯ ಅನುಕಂಪದ ಅಲೆ ಇರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ..
ಉ: ಹೌದು, ಉದ್ಧವ್ ಹಾಗೂ ಪವಾರ್ ಇಬ್ಬರ ಪರವಾಗಿಯೂ ಅನುಕಂಪದ ಅಲೆ ಇರುವಂತೆ ಕಂಡು ಬರುತ್ತಿದೆ. ಇದು ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟವು ತನ್ನ ಸ್ಥಾನಗಳನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲು ನೆರವು ನೀಡಬಹುದು.
ಪ್ರ: ಬಿಹಾರದಲ್ಲಿ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ಎಷ್ಟು ದೊಡ್ಡ ಮಟ್ಟದ ಹಾನಿ ಮಾಡಬಹುದು?
ಉ: ತೇಜಸ್ವಿ ಯಾದವ್ ಬಿಹಾರದ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡಿದ್ದಾರೆ. ಇದೇ ವೇಳೆ, ನಿತೀಶ್ ಕುಮಾರ್ ಅವರ ವರ್ಚಸ್ಸಿಗೆ ಭಾರಿ ಹಾನಿಯಾಗಿದೆ. ಅವರನ್ನು ಅವಕಾಶವಾದಿಯನ್ನಾಗಿ ನೋಡಲಾಗುತ್ತಿದೆ. ಅವರ ಪಕ್ಷವು ಹಲವಾರು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಪ್ರ: ರಾಜಸ್ಥಾನದ ಕುರಿತು?
ಉ: ರಾಜಸ್ಥಾನದ ಹಲವಾರು ಮತದಾರರು ಮುಖ್ಯಮಂತ್ರಿ ಆಯ್ಕೆಯಿಂದ ಅತೃಪ್ತರಾಗಿದ್ದಾರೆ. ಇದು ಬಿಜೆಪಿಯ ಅವಕಾಶಗಳ ಮೇಲೆ ಪರಿಣಾಮವನ್ನುಂಟು ಮಾಡಬಹುದು.
ಪ್ರ: ಉತ್ತರ ಪ್ರದೇಶದಲ್ಲಿ ಏನಾಗಬಹುದು?
ಉ: ಉತ್ತರ ಪ್ರದೇಶ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳು ಬಿಜೆಪಿಯನ್ನು ಮೇಲ್ಜಾತಿ ಹಾಗೂ ಮೇಲ್ವರ್ಗಗಳ ಪಕ್ಷವೆಂದು ಭಾವಿಸಿದ್ದಾರೆ. ರೈತರೂ ಕೂಡಾ ಅಸಮಾಧಾನಗೊಂಡಿದ್ದಾರೆ.
ಪ್ರ: ತೆಲಂಗಾಣದಲ್ಲಿ ಬಿಜೆಪಿಗೆ 10-12 ಸ್ಥಾನಗಳು ದೊರೆಯಬಹುದು ಹಾಗೂ ಆಂಧ್ರಪ್ರದೇಶದಲ್ಲಿ 17-18 ಸ್ಥಾನಗಳು ದೊರೆಯಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂದಾಜಿಸಿದ್ದಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದೂ ಅವರು ನಿರೀಕ್ಷಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ…
ಉ: ಅಗತ್ಯವಾಗಿ ಆಗಬೇಕಿಲ್ಲ. ಪುಲ್ವಾಮಾ/ಬಾಲಾಕೋಟ್ ಆದ ಹಿಂದಿನ ಸಂದರ್ಭವನ್ನು ನೆನಪಿಸಿಕೊಳ್ಳಿ. ದೊಡ್ಡ ತಿರುವುಗಳು ಆಗುವ ಸಾಧ್ಯತೆ ಇದೆ.
ಪ್ರ: ಪಶ್ಚಿಮ ಬಂಗಾಳದ ಕುರಿತು ನಿಮ್ಮ ಅಂದಾಜುಗಳೇನು?
ಉ: ಕಳೆದ ಚುನಾವಣೆಯಲ್ಲಿ ತಾನು ಗಳಿಸಿದ್ದ ಸ್ಥಾನಗಳ ಸಮೀಪಕ್ಕೆ ಬಿಜೆಪಿ ಬರಬಹುದು.
ಪ್ರ: 272-273 ಗಡಿಯ ಸಮೀಪ ಯಾರು ತಲುಪಬಹುದು?
ಉ: ಇದು ಊಹಾತ್ಮಕವಾಗಬಹುದಾದರೂ, ಇಂಡಿಯಾ ಮೈತ್ರಿಕೂಟಕ್ಕೆ ಮುಂದಿನ ಸರಕಾರ ರಚಿಸುವ ಅವಕಾಶ ದೊರೆಯುವ ಸಾಧ್ಯತೆ ಇದೆ.
ಸೌಜನ್ಯ: newindianexpress.com