ಇಂದಿನಿಂದ ಮುಂಬೈನಲ್ಲಿ INDIA ಮೈತ್ರಿಕೂಟದ ಸಭೆ: ಲಾಂಛನ, ಸಮನ್ವಯ ಸಮಿತಿ, ಜಂಟಿ ಕ್ರಿಯಾ ಯೋಜನೆ ಅಂತಿಮಗೊಳ್ಳುವ ನಿರೀಕ್ಷೆ
Photo: ANI
ಮುಂಬೈ: ಇಂದಿನಿಂದ ಮುಂಬೈನಲ್ಲಿ ಆರಂಭವಾಗಲಿರುವ ವಿರೋಧ ಪಕ್ಷಗಳ ಎರಡು ದಿನಗಳ ಸಭೆಯಲ್ಲಿ INDIA ಮೈತ್ರಿಕೂಟದ ಸದಸ್ಯರು 2024 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಲಾಂಛನ, ಸಮನ್ವಯ ಸಮಿತಿ ಹಾಗೂ ಜಂಟಿ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.
ತಮ್ಮ ಮೂರನೇ ಸುತ್ತಿನ ಚರ್ಚೆಯ ಮೊದಲು ವಿರೋಧ ಪಕ್ಷ ಒಕ್ಕೂಟವಾದ INDIA ಮೈತ್ರಿಕೂಟದ ಹಲವಾರು ನಾಯಕರು ತಾವು ಸರಕಾರಕ್ಕೆ ಅಸಾಧಾರಣ ಎದುರಾಳಿ ಎಂದು ಸಾಬೀತುಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ಮುಂಬೈನ ಗ್ರ್ಯಾಂಡ್ ಹಯಾಟ್ ಹೋಟೆಲ್ನಲ್ಲಿ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟದ (INDIA) ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಪ್ರಮುಖ ಅಜೆಂಡಾಗಳಲ್ಲಿ ಮೈತ್ರಿ ಕೂಟಕ್ಕೆ ಲೋಗೋವನ್ನು ಆಯ್ಕೆ ಮಾಡಲಾಗುವುದು ಹಾಗೂ ಎಲ್ಲಾ ಸದಸ್ಯ ಪಕ್ಷಗಳ ನಡುವೆ ಸಮನ್ವಯವನ್ನು ಹೆಚ್ಚಿಸಲು ಸಮಿತಿಯನ್ನು ರಚಿಸಲಾಗುವುದು.
ವಿರೋಧ ಪಕ್ಷದ ಮೈತ್ರಿಕೂಟವು ಸಂಚಾಲಕರನ್ನು ಹೊಂದಬೇಕೆ ಅಥವಾ ಬೇಡವೇ ಮತ್ತು 2024 ರ ಚುನಾವಣೆಗೆ ಜಂಟಿ ಕ್ರಿಯಾ ವೇಳಾಪಟ್ಟಿಯನ್ನು ಹೊಂದಬೇಕೆ ಎಂಬುದರ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.
ಮಮತಾ ಬ್ಯಾನರ್ಜಿ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರು ಈಗಾಗಲೇ ಮುಂಬೈಗೆ ಆಗಮಿಸಿದ್ದಾರೆ.
ಅರವಿಂದ ಕೇಜ್ರಿವಾಲ್, ಭಗವಂತ್ ಮಾನ್, ನಿತೀಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಂದು ಮುಂಬೈಗೆ ಬಂದಿಳಿಯಲಿದ್ದು, ನಂತರ ಉದ್ಧವ್ ಠಾಕ್ರೆ ಆಯೋಜಿಸಿದ್ದ ಔತಣಕೂಟದಲ್ಲಿ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್ ಸಿಪಿ ವರಿಷ್ಠ ಶರದ್ ಪವಾರ್, “ದೇಶದಲ್ಲಿ ರಾಜಕೀಯ ಬದಲಾವಣೆಯನ್ನು ತರಲು ಪ್ರತಿಪಕ್ಷಗಳ ಒಕ್ಕೂಟವು ಅಸಾಧಾರಣ ಪರ್ಯಾಯವನ್ನು ಒದಗಿಸುತ್ತದೆ ಎಂಬ ವಿಶ್ವಾಸವಿದೆ. INDIA ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ‘’ಎಂದು ಹೇಳಿದ್ದಾರೆ.