ಮೋದಿ-ಬೈಡನ್ ಮಾತುಕತೆ ವೇಳೆ ಮಾಧ್ಯಮಗಳ ಉಪಸ್ಥಿತಿಗೆ ಅನುಮತಿ ನಿರಾಕರಿಸಿದ ಭಾರತ : ಶ್ವೇತಭವನ ಬಹಿರಂಗ
ಜೋ ಬೈಡನ್ , ನರೇಂದ್ರ ಮೋದಿ| Twitter/Narendra Modi
ಹೊಸದಿಲ್ಲಿ : ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ಸಂದರ್ಭದಲ್ಲಿ ಮಾಧ್ಯಮಗಳ ಉಪಸ್ಥಿತಿಗೆ ಅವಕಾಶ ನೀಡಬೇಕೆಂಬ ತನ್ನ ಕೋರಿಕೆಯನ್ನು ಭಾರತ ನಿರಾಕರಿಸಿದೆಯೆಂದು ಶ್ವೇತಭವನವು ಗುರುವಾರ ತಿಳಿಸಿದೆ.
ಇದರಿಂದಾಗಿ ಬೈಡನ್ ಜೊತೆಗೆ ಜಿ20 ಶೃಂಗಸಭೆಯ ವರದಿಗಾಗಿ ಭಾರತಕ್ಕೆ ಆಗಮಿಸಿರುವ ಪತ್ರಕರ್ತರಿಗೆ ಬೈಡೆನ್ ಅಥವಾ ಮೋದಿ ಅವರೊಂದಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ದೊರೆಯುವುದಿಲ್ಲವೆಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಬೈಡನ್ ಅವರ ಭಾರತ ಭೇಟಿ ಸಂದರ್ಭದಲ್ಲಿ ಮಾಧ್ಯಮಗಳಿಗೆ ಉತ್ತಮ ಪ್ರವೇಶಾವಕಾಶ ದೊರೆಯಲು ತನ್ನಿಂದ ಸಾಧ್ಯವಿರುವಷ್ಟು ಪ್ರಯತ್ನ ಮಾಡಿರುವುದಾಗಿ ಶ್ವೇತಭವನವು ಹೇಳಿಕೆಯೊಂದರಲ್ಲಿ ತಿಳಿಸಿದೆ.
“ಮೋದಿ-ಬೈಡನ್ ಮಾತುಕತೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರವೇಶಾವಕಾಶ ದೊರೆಯಲು ಹಲವಾರು ಬಾರಿ ವಿಭಿನ್ನ ಸ್ತರಗಳಲ್ಲಿ ಪ್ರಯತ್ನಿಸಿದ್ದೇವೆ. ರಾಷ್ಟ್ರೀಯ ಭದ್ರತಾ ಮಂಡಳಿ ಮಟ್ಟದಲ್ಲೂ ಈ ಬಗ್ಗೆ ಪ್ರಯತ್ನಿಲಾಗಿದೆ. ಈ (ಭಾರತ) ಪ್ರವಾಸವು ಅಧ್ಯಕ್ಷರಿಗೆ ಮಾತ್ರವಲ್ಲದೆ ಮಾಧ್ಯಮ ಮಂದಿಗೂ ಸುಗಮವಾಗುವಂತೆ ನಾವು ಕಷ್ಟಪಟ್ಟು ಶ್ರಮಿಸಿದ್ದೇವೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಇದೀಗ ಈ ವಿಷಯದ ಬಗ್ಗೆ ಮಾತನಾಡುವುದನ್ನು ಭಾರತ ಸರಕಾರಕ್ಕೆ ಬಿಟ್ಟಿದ್ದೇವೆ’’ ಎಂದವರು ಹೇಳಿದ್ದಾರೆ.
ಈ ಮಧ್ಯೆ ಅಮೆರಿಕದ ರಾಷ್ಟ್ರೀಯ ಭದ್ರತಾಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಹೇಳಿಕೆಯೊಂದನ್ನು ನೀಡಿ ಮೋದಿ ಹಾಗೂ ಬೈಡನ್ ಮಾತುಕತೆಯ ವಿವರಗಳನ್ನು ಮಾಧ್ಯಮಗಳಿಗೆ ಓದಿ ಹೇಳಲಾಗುವುದೆಂದು ತಿಳಿಸಿದ್ದಾರೆ.
ಬೈಡನ್ ಅವರು ಮೋದಿಯವರನ್ನು ಶುಕ್ರವಾರ ಸಂಜೆ ಹೊಸದಿಲ್ಲಿಯಲ್ಲಿರುವ ಪ್ರಧಾನಿ ಮೋದಿಯವರ ಅಧಿಕೃತ ನಿವಾಸ 7, ಲೋಕಕಲ್ಯಾಣ ಮಾರ್ಗ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.