ಸುಂಕ ಇಳಿಸಲು ಭಾರತ ಒಪ್ಪಿಕೊಂಡಿದೆ: ಟ್ರಂಪ್

PC: x.com/thewire_in
ಹೊಸದಿಲ್ಲಿ: ಭಾರತ ಸುಂಕ ಇಳಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪ್ರತಿಪಾದಿಸಿದ್ದಾರೆ. ಇದಕ್ಕೂ ಮುನ್ನ ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿ, ಸುಂಕದ ಬೆದರಿಕೆಯನ್ನು ಬಗೆಹರಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು. ಆದರೆ ಸುಂಕವನ್ನು ಇಳಿಸುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರಲಿಲ್ಲ.
"ಭಾರತ ನಮ್ಮ ಮೇಲೆ ಭಾರಿ ಸುಂಕ ವಿಧಿಸುತ್ತಿದೆ. ಇದು ದೊಡ್ಡ ಪ್ರಮಾಣದ್ದು ಎಂದು ನೀವು ಒಪ್ಪಿಕೊಂಡಿದ್ದೀರಿ; ಇದೀಗ ಈ ಸುಂಕವನ್ನು ಕಡಿತಗೊಳಿಸಲು ಬಯಸಿದ್ದಾರೆ; ಏಕೆಂದರೆ ಅಂತಿಮವಾಗಿ ಅವರು ಮಾಡಿದ್ದನ್ನು ಕೆಲವರು ಬಹಿರಂಗಪಡಿಸಿದ್ದಾರೆ" ಎಂದು ಟ್ರಂಪ್ ಹೇಳಿದ್ದಾರೆ.
ಮುಂದಿನ ತಿಂಗಳುಗಳಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಟೆಸ್ಲಾ ನಡೆಸುತ್ತಿದ್ದು, ಶೂನ್ಯ ಸುಂಕದ ನಿರೀಕ್ಷೆಯಲ್ಲಿದೆ. ಭಾರತ ಪ್ರಸ್ತುತ ಶೇಕಡ 110ರಷ್ಟು ಆಮದು ಸುಂಕವನ್ನು ವಾಹನಗಳ ಆಮದಿನ ಮೇಲೆ ವಿಧಿಸುತ್ತಿದೆ. ಇದನ್ನು ಟೆಸ್ಲಾ ಸಿಇಓ ಎಲಾನ್ ಮಸ್ಕ್ ವಿಶ್ವದಲ್ಲೇ ಅತ್ಯಧಿಕ ಸುಂಕ ಎಂದು ಖಂಡಿಸಿದ್ದರು. ಭಾರಿ ಸುಂಕದ ಕಾರಣದಿಂದ ಈ ಮೊದಲು ವಿಶ್ವದಲ್ಲೇ ವಾಹನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿರುವ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ಧಾರವನ್ನು ಕೈಬಿಟ್ಟಿತ್ತು.
ಕೆನಡಾ, ಚೀನಾ, ಮೆಕ್ಸಿಕೋ ಮತ್ತು ಭಾರತದ ಮೇಲೆ ಏಪ್ರಿಲ್ 2ರಿಂದ ಜಾರಿಯಾಗುವಂತೆ ಸುಂಕ ವಿಧಿಸಿರುವುದನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದು, "ನಮ್ಮ ದೇಶವನ್ನು ಪ್ರತಿಯೊಬ್ಬರೂ ಕಿತ್ತು ತಿಂದಿದ್ದಾರೆ. ನನ್ನ ಮೊದಲ ಅವಧಿಯಲ್ಲಿ ಇದು ನಿಂತಿತ್ತು. ಅವು ನ್ಯಾಯಸಮ್ಮತವಲ್ಲದ ಕಾರಣ ನಾವು ಅದನ್ನು ನಿಜವಾಗಿಯೂ ಸ್ಥಗಿತಗೊಳಿಸಲಿದ್ದೇವೆ. ಆರ್ಥಿಕ ದೃಷ್ಟಿಕೋನದಿಂದ, ಹಣಕಾಸು ಮತ್ತು ವ್ಯಾಪಾರ ದೃಷ್ಟಿಕೋನದಿಂದ ನಮ್ಮ ದೇಶವನ್ನು ಬಹುತೇಕ ವಿಶ್ವದ ಎಲ್ಲ ದೇಶಗಳು ಕಿತ್ತು ತಿನ್ನುತ್ತಿವೆ" ಎಂದರು.