ʼಶೂನ್ಯ ಆಹಾರʼ ಮಕ್ಕಳ ಪ್ರಮಾಣ ಗಿನಿ ಮತ್ತು ಮಾಲಿ ದೇಶಗಳಲ್ಲಿಯ ಬಳಿಕ ಭಾರತದಲ್ಲಿಯೇ ಅತ್ಯಂತ ಹೆಚ್ಚು
ಸಾಂದರ್ಭಿಕ ಚಿತ್ರ (Photo credit: madhyamam.com)
ಹೊಸದಿಲ್ಲಿ: ಭಾರತದಲ್ಲಿಯ ‘ಶೂನ್ಯ ಆಹಾರ’ ಮಕ್ಕಳ ಪ್ರಮಾಣವನ್ನು ಪಶ್ಚಿಮ ಆಫ್ರಿಕಾದ ಗಿನಿ, ಬೆನಿನ್, ಲೈಬೀರಿಯಾ ಮತ್ತು ಮಾಲಿ ದೇಶಗಳಲ್ಲಿಯ ದರಗಳಿಗೆ ಹೋಲಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-21)ರ ದತ್ತಾಂಶಗಳನ್ನು ಬಳಸಿಕೊಂಡು ನಡೆಸಲಾದ ಅಧ್ಯಯನವು ತೋರಿಸಿದೆ. ‘ಶೂನ್ಯ- ಆಹಾರ’ ಮಕ್ಕಳನ್ನು 24 ಗಂಟೆಗಳ ಅವಧಿಯಲ್ಲಿ ಏನನ್ನೂ ಸೇವಿಸಿರದ ಮಕ್ಕಳು ಎಂದು ವ್ಯಾಖ್ಯಾನಿಸಲಾಗಿದೆ ಎಂದು thewire.in ವರದಿ ಮಾಡಿದೆ.
ಭಾರತದಲ್ಲಿ ಶೂನ್ಯ-ಆಹಾರ ಮಕ್ಕಳ ಪ್ರಮಾಣ ಶೇ.19.3ರಷ್ಟಿದೆ ಎಂದು ಅಧ್ಯಯನವು ಅಂದಾಜಿಸಿದೆ. ಇದು ಗಿನಿ(ಶೇ.21.8) ಮತ್ತು ಮಾಲಿ(ಶೇ.20.5) ದೇಶಗಳ ನಂತರ ಮೂರನೇ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ.
ಬಾಂಗ್ಲಾದೇಶ (ಶೇ.5.6),ಪಾಕಿಸ್ತಾನ (ಶೇ.9.2).ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಶೇ.7.4),ನೈಜೀರಿಯಾ (ಶೇ.8.8) ಮತ್ತು ಇಥಿಯೋಪಿಯಾ (ಶೇ.14.8) ಗಳಲ್ಲಿ ಶೂನ್ಯ-ಆಹಾರ ಮಕ್ಕಳ ಸಂಖ್ಯೆ ತೀರ ಕಡಿಮೆಯಿದೆ.
ಹಾರ್ವರ್ಡ್ ವಿವಿಯ ಜನಾರೋಗ್ಯ ಸಂಶೋಧಕ ಎಸ್.ವಿ.ಸುಬ್ರಮಣಿಯನ್ ಮತ್ತು ಅವರ ಸಹೋದ್ಯೋಗಿಗಳು 2010 ಮತ್ತು 2021ರ ನಡುವಿನ ವಿವಿಧ ಅವಧಿಗಳಲ್ಲಿ ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ 92 ದೇಶಗಳಲ್ಲಿಯ ಆರೋಗ್ಯ ಸಮೀಕ್ಷೆಗಳನ್ನು ಬಳಸಿಕೊಂಡು ಈ ಅಧ್ಯಯನವನ್ನು ನಡೆಸಿದ್ದು,‘ಜೆಎಎಂಎ ನೆಟ್ವರ್ಕ್ ಓಪನ್ ’ ಜರ್ನಲ್ನಲ್ಲಿ ಅಧ್ಯಯನ ವರದಿಯು ಪ್ರಕಟಗೊಂಡಿದೆ.
ದಕ್ಷಿಣ ಏಶ್ಯಾದಲ್ಲಿ ಶೂನ್ಯ-ಆಹಾರ ಮಕ್ಕಳ ಪ್ರಮಾಣವು ಗರಿಷ್ಠವಾಗಿದ್ದು (ಅಂದಾಜು 80 ಲಕ್ಷ), ಇದರಲ್ಲಿ ಭಾರತವೊಂದರ ಪಾಲೇ 67 ಲಕ್ಷಕ್ಕೂ ಅಧಿಕವಾಗಿದೆ ಎನ್ನುವುದನ್ನು ವರದಿಯು ಬಹಿರಂಗಗೊಳಿಸಿದೆ.
ಶಿಶುಗಳಿಗೆ ಆಹಾರ ಆರೈಕೆಯ ಕೊರತೆ:
ಭಾರತದಲ್ಲಿನ ಮಕ್ಕಳ ಪೋಷಣೆಯ ಸಮಸ್ಯೆಗಳ ಬಗ್ಗೆ ತಿಳಿಸಿರುವ ಆಹಾರ ತಜ್ಞರ ಪ್ರಕಾರ,ಶೂನ್ಯ-ಆಹಾರ ಮಕ್ಕಳಿಗೆ ಕಾರಣವಾಗುವ ಆಹಾರದ ಅಲಭ್ಯತೆಯು ಆಹಾರದ ಕೊರತೆಯನ್ನು ಸೂಚಿಸದಿರಬಹುದು,ಆದರೆ ತಮ್ಮ ಶಿಶುಗಳಿಗೆ ಕಾರಣಾಂತರಗಳಿಂದ ಸಕಾಲದಲ್ಲಿ ಹಾಲೂಡಿಸುವ ಅನೇಕ ತಾಯಂದಿರ ಅಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಶೂನ್ಯ-ಆಹಾರದ ಮಕ್ಕಳು 24 ಗಂಟೆಗಳ ಅವಧಿಯಲ್ಲಿ ಯಾವುದೇ ಹಾಲು ಅಥವಾ ಘನ ಆಹಾರ ಅಥವಾ ಅರೆ ಘನ ಆಹಾರವನ್ನು ಸೇವಿಸಿರದ 6ರಿಂದ 24 ತಿಂಗಳು ವಯಸ್ಸಿನ ಮಕ್ಕಳಾಗಿದ್ದಾರೆ.
ಸಮೀಕ್ಷೆ ನಡೆಸಲಾದ 92 ದೇಶಗಳಲ್ಲಿ ಶೇ.99ಕ್ಕೂ ಅಧಿಕ ಶೂನ್ಯ-ಆಹಾರ ಮಕ್ಕಳು ಎದೆಹಾಲನ್ನುಂಡಿರುವುದು ಆಹಾರದಿಂದ ವಂಚಿತರಾಗಿದ್ದ 24 ಗಂಟೆಗಳ ಅವಧಿಯಲ್ಲಿ ಕೆಲವು ಕ್ಯಾಲೊರಿಗಳನ್ನು ಪಡೆದಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಆದರೆ ಆರು ತಿಂಗಳು ಪ್ರಾಯದ ಶಿಶುಗಳಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸಲು ಸ್ತನ್ಯಪಾನವೊಂದೇ ಸಾಲುವುದಿಲ್ಲ. ಅದರ ಜೊತೆಗೆ ಈ ಮಕ್ಕಳಿಗೆ ಹೆಚ್ಚುವರಿ ಆಹಾರದ ಮೂಲಕ ಸಾಕಷ್ಟು ಪ್ರೋಟಿನ್,ಶಕ್ತಿ,ವಿಟಾಮಿನ್ಗಳು ಮತ್ತು ಖನಿಜಗಳು ಅಗತ್ಯವಾಗುತ್ತವೆ ಎಂದು ಅಧ್ಯಯನ ವರದಿಯು ಹೇಳಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಹಸ್ತಕ್ಷೇಪಗಳ ಅಗತ್ಯವಿದೆ ಎನ್ನುವುದನ್ನು ಅಂಕಿಅಂಶಗಳು ಎತ್ತಿ ತೋರಿಸಿವೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಹೇಳಿದ್ದಾರೆ.