ಭೂಕಂಪ ಪೀಡಿತ ಮ್ಯಾನ್ಮಾರ್ ಗೆ ಸಹಾಯ ಹಸ್ತ ಚಾಚಿದ ಭಾರತ

PC: x.com/DrSJaishankar
ಹೊಸದಿಲ್ಲಿ: ಮಹತ್ವದ ರಾಜತಾಂತ್ರಿಕ ಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮ್ಯಾನ್ಮಾರ್ ನ ಮಿಲಿಟರಿ ಜುಂಟಾ ಸರ್ಕಾರಕ್ಕೆ ಸ್ನೇಹ ಹಸ್ತ ಚಾಚಿದ್ದಾರೆ. ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್ ಡಿಆರ್ ಎಫ್)ಯ 80 ಮಂದಿಯ ತಂಡವನ್ನು ಭೂಕಂಪಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ಪರಿಹಾರ ಕಾರ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
1600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 2000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿರುವ ನೇ ಪೈ ತಾವ್ ಪ್ರದೇಶಕ್ಕೆ 'ಆಪರೇಶನ್ ಬ್ರಹ್ಮ' ಹೆಸರಿನ ಕಾರ್ಯಾಚರಣೆಗಾಗಿ ಭಾರತ ಎನ್ ಡಿಆರ್ ಎಫ್ ತಂಡವನ್ನು ಶನಿವಾರ ಕಳುಹಿಸಿಕೊಟ್ಟಿದೆ. ಈ ವಿಶೇಷ ತಂಡವು ನಗರ ಶೋಧ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿದೆ. ಅಂತೆಯೇ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಅಗತ್ಯ ಸಾಧನ ಸಲಕರಣೆಗಳನ್ನು ಕೂಡಾ ನೀಡಿದೆ.
ಇತರ ದೇಶಗಳ ರಾಷ್ಟ್ರೀಯ ವಿಪತ್ತು ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ "ಪ್ರಥಮ ಸ್ಪಂದನೆ" ಪಾತ್ರವನ್ನು ಭಾರತ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ವಿವರ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ, "ಭಾರತ ಈಗಾಗಲೇ ಎರಡು ನೌಕಾ ಹಡಗುಗಳನ್ನು ಮ್ಯಾನ್ಮಾರ್ ಗೆ ಕಳುಹಿಸಿಕೊಟ್ಟಿದೆ. ಹೆಚ್ಚುವರಿಯಾಗಿ ಶನಿವಾರ ರಾತ್ರಿ 118 ಮಂದಿ ತಜ್ಞರನ್ನು ಒಳಗೊಂಡ ಕ್ಷೇತ್ರ ಆಸ್ಪತ್ರೆ ಆಗ್ರಾದಿಂದ ತೆರಳಿದೆ" ಎಂದು ಹೇಳಿದರು.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮನ್ವಯಕ್ಕಾಗಿ ಮ್ಯಾನ್ಮಾರ್ ನಲ್ಲಿರುವ ಭಾರತದ ರಾಯಭಾರಿಯವರು ರಾಜಧಾನಿ ನೇ ಪೈ ತಾವ್ ಗೆ ಧಾವಿಸಿದ್ದಾರೆ. ಮ್ಯಾನ್ಮಾರ್ ನಲ್ಲಿರುವ ಭಾರತೀಯ ಸಮುದಾಯದ ಯಾರೂ ಮೃತಪಟ್ಟಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎನ್ ಡಿಆರ್ ಎಫ್ ತಂಡ ಮ್ಯಾನ್ಮಾರ್ ಗೆ ಪ್ರಯಾಣ ಬೆಳೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಹಿರಿಯ ಜನರಲ್ ಮಿನ್ ಆಂಗ್ ಲೈಂಗ್ ಜತೆ ಮಾತನಾಡಿ, ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು."ಅತ್ಯಂತ ನಿಕಟ ಸ್ನೇಹರಾಷ್ಟ್ರ ಮತ್ತು ನೆರೆಯ ದೇಶವಾಗಿ ಭಾರತ ತನ್ನ ಬದ್ಧತೆಯನ್ನು ಹೊಂದಿದೆ" ಎಂದು ಹೇಳಿದರು.
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ಅವರು ಎಕ್ಸ್ ಪೋಸ್ಟ್ ಮೂಲಕ ಭಾರತದ ಬೆಂಬಲವನ್ನು ಪ್ರಕಟಿಸಿದ್ದಾರೆ.