ಜಿಡಿಪಿ ಅಂಕಿಸಂಖ್ಯೆಗಳ ವಾಸ್ತವವನ್ನು ಭಾರತವು ಮುಚ್ಚಿಡುತ್ತಿದೆ: ಅರ್ಥಶಾಸ್ತ್ರಜ್ಞ ಅಶೋಕ ಮೋದಿ
ಸಾಂದರ್ಭಿಕ ಚಿತ್ರ. | Photo: PTI
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ)ಯು ಭಾರತದ ಬೆಳವಣಿಗೆಯ ದರವನ್ನು ಲೆಕ್ಕ ಹಾಕಲು ಆಯ್ದ ಡೇಟಾವನ್ನು ಪರಿಗಣಿಸುವ ಮೂಲಕ ‘ವಾಸ್ತವವನ್ನು ಮುಚ್ಚಿಡುತ್ತಿದೆ ’ಎಂದು ಅರ್ಥಶಾಸ್ತ್ರಜ್ಞ ಅಶೋಕ ಮೋದಿ ಅವರು ಪ್ರತಿಪಾದಿಸಿದ್ದಾರೆ.
ಹೆಚ್ಚು ಪೂರ್ಣ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡರೆ 2023-24ರ ವಿತ್ತವರ್ಷದ
ಮೊದಲ ತ್ರೈಮಾಸಿಕ (ಎಪ್ರಿಲ್-ಜೂನ್)ದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರವು ಸರಕಾರವು ಪ್ರಕಟಿಸಿರುವ ಶೇ.7.8ರ ಬದಲು ಶೇ.4.5 ಆಗುತ್ತದೆ ಎಂದು ಮೋದಿ ‘ಪ್ರಾಜೆಕ್ಟ್ ಸಿಂಡಿಕೇಟ್’ಗಾಗಿ ಲೇಖನದಲ್ಲಿ ಬರೆದಿದ್ದಾರೆ.
ಮೋದಿ ಅವರ ಪ್ರತಿಪಾದನೆಯನ್ನು ಶುಕ್ರವಾರ ತಿರಸ್ಕರಿಸಿರುವ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರು, ಬೆಳವಣಿಗೆಯ ಸಂಖ್ಯೆಗಳನ್ನು ಲೆಕ್ಕ ಹಾಕಲು ಸರಕಾರವು ಸ್ಥಿರವಾದ ವಿಧಾನವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಕೆಲವು ವ್ಯಾಖ್ಯಾನಕಾರರು ಮೊಂಡುಹಟವನ್ನು ಹೊಂದಿದ್ದಾರೆ. ಸಾಕಷ್ಟು ಪುರಾವೆಗಳಿದ್ದರೂ ಅವರು ತಮ್ಮ ಮೊದಲಿನ ನಿಲುವುಗಳಿಗೇ ಅಂಟಿಕೊಂಡಿರುತ್ತಾರೆ ಎಂದು ‘ಮಿಂಟ್’ನಲ್ಲಿ ಹಿರಿಯ ಆರ್ಥಿಕ ಸಲಹೆಗಾರ ರಾಜೀವ ಮಿಶ್ರಾರೊಂದಿಗೆ ಜಂಟಿಯಾಗಿ ಬರೆದಿರುವ ಲೇಖನದಲ್ಲಿ ನಾಗೇಶ್ವರನ್ ಹೇಳಿದ್ದಾರೆ.
ಅಮೆರಿಕದ ಪ್ರಿನ್ಸ್ಟನ್ ವಿವಿಯಲ್ಲಿ ಅರ್ಥಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಮೋದಿ,ಬೆಳವಣಿಗೆ ದರವನ್ನು ನಿರ್ಧರಿಸಲು ಎನ್ಎಸ್ಒ ದೇಶಿಯ ಆದಾಯದ ಅಂದಾಜುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ,ಅದು ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ವಾದಿಸಿದ್ದಾರೆ. ದೇಶಿಯ ಆದಾಯವು ದೇಶದಲ್ಲಿ ಸರಕುಗಳು ಮತ್ತು ಸೇವೆಗಳಿಂದ ದೊರೆಯುವ ಗಳಿಕೆಯನ್ನು ಸೂಚಿಸಿದರೆ ವೆಚ್ಚವು ಅವುಗಳನ್ನು ಖರೀದಿಸಲು ಭಾರತೀಯರು ಮತ್ತು ವಿದೇಶಿಯರು ವ್ಯಯಿಸುವ ಮೊತ್ತವನ್ನು ಸೂಚಿಸುತ್ತದೆ.
ತಾತ್ವಿಕವಾಗಿ ಈ ಎರಡೂ ಸಂಖ್ಯೆಗಳು ಸಮಾನವಾಗಿರಬೇಕು,ಏಕೆಂದರೆ ಇತರರು ತಮ್ಮ ಉತ್ಪನ್ನಗಳನ್ನು ಖರೀದಿಸಿದಾಗ ಮಾತ್ರ ಉತ್ಪಾದಕರು ಆದಾಯವನ್ನು ಗಳಿಸುತ್ತಾರೆ ಎಂದು ಮೋದಿ ಲೇಖನದಲ್ಲಿ ವಿವರಿಸಿದ್ದಾರೆ. ಆದಾಗ್ಯೂ ದೇಶಗಳ ರಾಷ್ಟ್ರೀಯ ಖಾತೆಗಳು ಅಪೂರ್ಣ ಡೇಟಾವನ್ನು ಆಧರಿಸಿರುವುದರಿಂದ ವಿಶ್ವಾದ್ಯಂತ ಈ ಎರಡು ಸಂಖ್ಯೆಗಳು ಭಿನ್ನವಾಗಿರುತ್ತವೆ.
ಆದಾಯ ಮತ್ತು ವೆಚ್ಚ ಇವೆರಡನ್ನೂ ಅಪೂರ್ಣ ಸ್ಥೂಲ ಒಟ್ಟು ಮೊತ್ತ ಎಂದು ಗುರುತಿಸುವುದು ಮತ್ತು ಅವುಗಳನ್ನು ಒಟ್ಟು ಸೇರಿಸುವುದು ಆರ್ಥಿಕತೆಯ ಸ್ಥಿತಿಯನ್ನು ನಿರ್ಧರಿಸಲು ಸೂಕ್ತ ವಿಧಾನವಾಗಿದೆ ಎಂದು ಮೋದಿ ಬರೆದಿದ್ದಾರೆ. ಆಸ್ಟ್ರೇಲಿಯಾ, ಜರ್ಮನಿ ಮತ್ತು ಬ್ರಿಟನ್ನಲ್ಲಿಯ ಸರಕಾರಗಳು ಈ ವಿಧಾನವನ್ನು ಬಳಸುತ್ತಿವೆ ಎಂದು ಅವರು ಹೇಳಿದ್ದಾರೆ.
ಆ.31ರಂದು ಬಿಡುಗಡೆಗೊಂಡ ಭಾರತದ ಮೊದಲ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳಲ್ಲಿ ಈ ಎರಡು ಸಂಖ್ಯೆಗಳಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿದೆ ಎಂದು ಬೆಟ್ಟು ಮಾಡಿರುವ ಮೋದಿ,ಎಪ್ರಿಲ್-ಜೂನ್ ಅವಧಿಯಲ್ಲಿ ಉತ್ಪಾದನೆಯಿಂದ ಆದಾಯವು ಶೇ.7.8ರ ವಾರ್ಷಿಕ ದರದಲ್ಲಿ ಏರಿಕೆಯಾಗಿದೆ,ಆದರೆ ವೆಚ್ಚವು ಕೇವಲ ಶೇ.1.4ರಷ್ಟು ಹೆಚ್ಚಾಗಿದೆ. ಆದಾಯ ಸಂಖ್ಯೆಗಳನ್ನು ಮಾತ್ರ ಪರಿಗಣಿಸುವ ಎನ್ಎಸ್ಒ ವಿಧಾನವು ಅಂತರರಾಷ್ಟ್ರೀಯ ಅತ್ಯುತ್ತಮ ಪರಿಪಾಠದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬರೆದಿದ್ದಾರೆ.
ಅನೇಕ ಭಾರತೀಯರು ಸಂಕಷ್ಟದಲ್ಲಿರುವ ಮತ್ತು ಭಾರತೀಯ ಸರಕುಗಳಿಗೆ ವಿದೇಶಿಯರಿಂದ ಸೀಮಿತ ಬೇಡಿಕೆ ಮಾತ್ರವಿರುವ ಸಮಯದಲ್ಲಿ ಎನ್ಎಸ್ಒ ಕಳಪೆ ವೆಚ್ಚದ ವಾಸ್ತವವನ್ನು ಬಚ್ಚಿಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಹೇಳಿಕೆಗಳಿಗೆ ತನ್ನ ಪ್ರತಿಕ್ರಿಯೆಯಲ್ಲಿ ನಾಗೇಶ್ವರನ್,ಭಾರತದಲ್ಲಿಯ ಡೇಟಾ ವ್ಯವಸ್ಥೆಗಳ ವಿನ್ಯಾಸವು ವೆಚ್ಚಕ್ಕಿಂತ ಆದಾಯ ಸಂಖ್ಯೆಗಳಿಂದ ಅಂದಾಜಿಸುವುದನ್ನು ಸುಲಭವಾಗಿಸುತ್ತದೆ. ಆದಾಯ ಸಂಖ್ಯೆಗಳು ವೆಚ್ಚಕ್ಕಿಂತ ಕಡಿಮೆಯಿದ್ದಾಗಲೂ ಜಿಡಿಪಿ ದರವನ್ನು ನಿರ್ಧರಿಸಲು ಸರಕಾರವು ಇದೇ ವಿಧಾನವನ್ನು ಬಳಸಿದೆ ಎಂದು ಹೇಳಿದ್ದಾರೆ.
ಆದಾಗ್ಯೂ ಮಿಂಟ್ನಲ್ಲಿ ಅವರ ನಿರಾಕರಣೆಯು ಮೋದಿಯವರು ಬೆಟ್ಟು ಮಾಡಿರುವ ಅಸಮಾನತೆ,ವೆಚ್ಚ ಮಾಡುವ ಸಾಮರ್ಥ್ಯ ಮತ್ತು ಉದ್ಯೋಗಗಳ ಕೊರತೆಯಂತಹ ಇತರ ವಿವಾದಾತ್ಮಕ ವಿಷಯಗಳಿಗೆ ಉತ್ತರಿಸಿಲ್ಲ.
ಖರ್ಚುಗಳ ಅಂಕಿಸಂಖ್ಯೆಗಳಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ಮುನ್ನ ಶೇ.22ರಷ್ಟಿದ್ದ ಆಮದು ಸರಕುಗಳ ಪಾಲು ಶೇ.26ಕ್ಕೆ ಏರಿಕೆಯಾಗಿದೆ ಎಂದು ಬರೆದಿರುವ ಮೋದಿ, ವಿನಿಮಯ ದರ ಹೆಚ್ಚಾಗಿರುವುದರ ನೆರವಿನಿಂದ ಶ್ರೀಮಂತ ಭಾರತೀಯರು ವೇಗದ ಕಾರುಗಳು,ಹೊಳೆಯುವ ವಾಚುಗಳು ಮತ್ತು ಡಿಸೈನರ್ ಕೈಚೀಲಗಳಂತಹ ಐಷಾರಾಮಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಆಗಾಗ್ಗೆ ಜ್ಯೂರಿಚ್,ಮಿಲಾನ್ ಮತ್ತು ಸಿಂಗಪುರಗಳಿಗೆ ಶಾಪಿಂಗ್ಗಾಗಿ ತೆರಳುತ್ತಾರೆ. ಇದೇ ವೇಳೆ ಹೆಚ್ಚಿನವರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದಿದ್ದಾರೆ.
ದೇಶದಲ್ಲಿ ಉದ್ಯೋಗ ಸೃಷ್ಟಿಯ ಕೊರತೆಯನ್ನೂ ಮೋದಿ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.
ಕೃಪೆ: scroll.in