ಮಹಿಳಾ ಸಬಲೀಕರಣ, ಲಿಂಗ ಸಮಾನತೆಯಲ್ಲಿ ಭಾರತ ಹಿಂದುಳಿದಿದೆ: ವರದಿ
ಹೊಸದಿಲ್ಲಿ: ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾದ ಯುಎನ್ ವುಮನ್ ಮತ್ತು ಯುಎನ್ ಡಿಪಿ ಬಿಡುಗಡೆ ಮಾಡಿದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಮಧ್ಯಮ ಮಟ್ಟದ ಮಾನವ ಅಭಿವೃದ್ಧಿ ಸಾಧಿಸಿದ ದೇಶಗಳ ಗುಂಪಿನಲ್ಲಿ ಸೇರಿದ್ದರೂ, ಮಹಿಳಾ ಸಬಲೀಕರಣ ಹಾಗೂ ಜಾಗತಿಕ ಲಿಂಗ ಸಮಾನತೆ ಅವಳಿ ಸೂಚ್ಯಂಕಗಳಲ್ಲಿ ಕೆಳಮಟ್ಟದಲ್ಲಿದೆ.
ವಿಶ್ವದ ಒಟ್ಟು ಮಹಿಳೆಯರ ಪೈಕಿ ಶೇಕಡ 90ರಷ್ಟು ಅಂದರೆ 310 ಕೋಟಿ ಮಹಿಳೆಯರು ಕನಿಷ್ಠ ಅಥವಾ ಮಧ್ಯಮ ಮಟ್ಟದ ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ಸಾಧಿಸಿದ ದೇಶಗಳಲ್ಲಿ ವಾಸವಿರುವುದನ್ನು ಈ ವರದಿ ಬಹಿರಂಗಪಡಿಸಿದೆ. ವಿಶ್ಲೇಷಣೆಗೆ ಒಳಪಡಿಸಿದ 114 ದೇಶಗಳ ಪೈಕಿ ಯಾವ ದೇಶವೂ ಸಂಪೂರ್ಣ ಮಹಿಳಾ ಸಬಲೀಕರಣ ಅಥವಾ ಲಿಂಗ ಸಮಾನತೆಯನ್ನು ಸಾಧಿಸಿಲ್ಲ.
ಬಹು ದೊಡ್ಡ ಸಂಖ್ಯೆಯ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದುವ ಮೂಲಕ ವಿತ್ತೀಯ ಸೇರ್ಪಡೆಯಲ್ಲಿ ಮತ್ತು ಸ್ಥಳೀಯ ಸರ್ಕಾರಗಳ ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಭಾರತ ಉತ್ತಮ ಸಾಧನೆ ಮಾಡಿದ್ದರೂ, ಕೌಶಲ ಅಭಿವೃದ್ಧಿ, ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯ ಅಸ್ತಿತ್ವ, ರಾಜಕೀಯ ಪಾಲ್ಗೊಳ್ಳುವಿಕೆ ಹಾಗೂ ಖಾಸಗಿ ವಲಯದಲ್ಲಿ ಪ್ರಾತಿನಿಧ್ಯ ವಿಚಾರಗಳಲ್ಲಿ ಹಿಂದಿರುವುದನ್ನು ವರದಿ ಬೆಳಕಿಗೆ ತಂದಿದೆ.
ಭಾರತದಲ್ಲಿ ಸಾಧಿಸಿರುವ ಉತ್ತಮ ಮಾನವ ಅಭಿವೃದ್ಧಿ, ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯಾಗಿ ಪರಿವರ್ತನೆಯಾಗಿಲ್ಲ ಎಂದು 114 ದೇಶಗಳನ್ನು ಮೌಲ್ಯಮಾಪನ ಮಾಡಿ ಸಿದ್ಧಪಡಿಸಿದ "ದ ಪಾಥ್ಸ್ ಟೂ ಈಕ್ವಲ್" ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದು ಆಯಾ ದೇಶಗಳಲ್ಲಿ ಸಾಧಿಸಿರುವ ಮಹಿಳಾ ಸಬಲೀಕರಣದ ಸಮಗ್ರ ಚಿತ್ರಣವನ್ನು ನೀಡುವ ವರದಿಯಾಗಿದೆ.
ಅತ್ಯಂತ ಕನಿಷ್ಠ ಲಿಂಗ ಸಮಾನತೆ ಹಾಗೂ ಗರಿಷ್ಠ ಮಹಿಳಾ ಸಬಲೀಕರಣ ಹೊಂದಿರುವ ದೇಶಗಳಲ್ಲಿ ವಾಸವಿರುವ ಮಹಿಳೆಯರ ಸಂಖ್ಯೆ ಶೇಕಡ ಒಂದಕ್ಕಿಂತಲೂ ಕಡಿಮೆ. ವಿಶ್ವಾದ್ಯಂತ ಮಹಿಳಾ ಸಬಲೀಕರಣದ ಸಂಭಾವ್ಯ ಸಾಧ್ಯತೆಗಳ ಪೈಕಿ ಶೇಕಡ 60ರಷ್ಟು ಮಾತ್ರ ಸಾಧನೆಯಾಗಿದೆ. ಪುರುಷರಿಗೆ ಹೋಲಿಸಿದರೆ ಮಹಿಳಾ ಸಬಲೀಕರಣದ ಪ್ರಮಾಣ ಶೇಕಡ 28ರಷ್ಟು ಕಡಿಮೆ ಎಂದು ವರದಿ ವಿವರಿಸಿದೆ.