ಸಾರ್ವಭೌಮ ಫೆಲೆಸ್ತೀನ್ ದೇಶದ ರಚನೆಯ ಅಗತ್ಯ ಒತ್ತಿ ಹೇಳಿದ ಭಾರತ
ಫೆಲೆಸ್ತೀನ್ ಕುರಿತ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದ ವಿದೇಶಾಂಗ ಸಚಿವಾಲಯದ ವಕ್ತಾರ
Photo : PTI
ಹೊಸದಿಲ್ಲಿ: ಸಾರ್ವಭೌಮ ಫೆಲೆಸ್ತೀನಿ ದೇಶವನ್ನು ರಚಿಸುವ ಅಗತ್ಯವನ್ನು ಭಾರತ ಒತ್ತಿ ಹೇಳಿದೆಯಲ್ಲದೆ ಮಾನವೀಯ ತತ್ವಗಳನ್ನು ಎತ್ತಿ ಹಿಡಿಯುವ ಬದ್ಧತೆಯಿದೆ ಎಂದು ಹೇಳಿದೆ.
ಸುದ್ದಿಗಾರರ ಜೊತೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾರತ ಎಲ್ಲಾ ಸಂಬಂಧಿತರ ಜೊತೆ ಸಂಪರ್ಕದಲ್ಲಿದೆ ಎಂದು ಹೇಳಿದರು.
“ಇಸ್ರೇಲ್ ಪಕ್ಕದಲ್ಲಿಯೇ ಭದ್ರ ಮತ್ತು ಮಾನ್ಯತೆ ಪಡೆದ ಗಡಿಗಳೊಳಗೆ ಸಾರ್ವಭೌಮ, ಸ್ವತಂತ್ರ ಫೆಲೆಸ್ತೀನ್ ದೇಶದ ರಚನೆಗೆ ನೇರ ಮಾತುಕತೆಯ ಪುನರಾರಂಭಕ್ಕೆ ಭಾರತ ಯಾವತ್ತೂ ಒತ್ತು ನೀಡಿದೆ,” ಎಂದು ಅವರು ಹೇಳಿದರಲ್ಲದೆ ಫೆಲೆಸ್ತೀನ್ ಕುರಿತಂತೆ ಭಾರತದ ನಿಲುವು ಸ್ಥಿರವಾಗಿದೆ ಹಾಗೂ ಆ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.
ಹಮಾಸ್ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಕಳೆದ ಶನಿವಾರ ಗಾಯಗೊಂಡಿದ್ದಾರೆ ಹಾಗೂ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದು.
ಇಸ್ರೇಲ್ ಮೇಲಿನ ಹಮಾಸ್ ದಾಳಿಯು ಒಂದು ಉಗ್ರ ದಾಳಿ ಎಂದು ಭಾರತ ನಂಬಿದೆ ಎಂದು ಅವರು ಹೇಳಿದರು.
ಮಾನವೀಯ ಕಾನೂನನ್ನು ಎತ್ತಿ ಹಿಡಿಯುವ ಅಗತ್ಯತೆ ಇದೆ, ಅದೇ ಸಮಯ ಅಂತರರಾಷ್ಟ್ರೀಯ ಉಗ್ರವಾದದ ವಿರುದ್ಧ ಹೋರಾಡುವ ಅಗತ್ಯವೂ ಇದೆ ಎಂದು ಅವರು ಹೇಳಿದರು.