ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಸರಕಾರ ರಚಿಸಲಿದೆ: ಮಲ್ಲಿಕಾರ್ಜುನ ಖರ್ಗೆ
ಬಿಜೆಪಿ ರಥವನ್ನು ಇಂಡಿಯಾ ಮೈತ್ರಿಕೂಟ ತಡೆದಿದೆ ಎಂದ ಅಖಿಲೇಶ್ ಯಾದವ್
Photo : PTI
ಲಕ್ನೊ: ಜೂನ್ 4ರಂದು ಇಂಡಿಯಾ ಮೈತ್ರಿಕೂಟವು ಸರಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸದ್ಯ ಪೂರ್ಣಗೊಂಡಿರುವ ನಾಲ್ಕು ಹಂತಗಳ ಮತದಾನದಲ್ಲಿ ಇಂಡಿಯಾ ಮೈತ್ರಿಕೂಟವು ಬಲಿಷ್ಠ ಸ್ಥಿತಿಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೀಳ್ಕೊಡುಗೆ ನೀಡಲು ದೇಶದ ಜನರು ಸಿದ್ಧವಾಗಿದ್ದಾರೆ ಎಂದು ಹೇಳಿದರು.
ಇಂದು ಲಕ್ನೊದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರೊಂದಿಗೆ ನಡೆದ ಇಂಡಿಯಾ ಮೈತ್ರಿಕೂಟದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, “ಸದ್ಯ ಪೂರ್ಣಗೊಂಡಿರುವ ನಾಲ್ಕು ಹಂತಗಳ ಮತದಾನದಲ್ಲಿ ಇಂಡಿಯಾ ಮೈತ್ರಿಕೂಟವು ಬಲಿಷ್ಠ ಸ್ಥಿತಿಯಲ್ಲಿದ್ದು, ದೇಶದ ಜನರು ಪ್ರಧಾನಿ ಮೋದಿಗೆ ಬೀಳ್ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಸರಕಾರ ರಚಿಸಲಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಈ ಚುನಾವಣೆ ಮುಖ್ಯವಾಗಿದೆ” ಎಂದು ಹೇಳಿದರು.
“ನಾವೆಲ್ಲರೂ ದೇಶದ ಭವಿಷ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಇಲ್ಲವಾದರೆ, ನಾವು ಮತ್ತೆ ಗುಲಾಮರಾಗಲಿದ್ದೇವೆ. ಒಂದು ವೇಳೆ ಪ್ರಜಾಪ್ರಭುತ್ವವಿಲ್ಲದೆ, ನಿರಂಕುಶಾಧಿಕಾರ ಹಾಗೂ ಸರ್ವಾಧಿಕಾರವಿದ್ದರೆ, ನಿಮ್ಮ ಸಿದ್ಧಾಂತಕ್ಕೆ ಹೊಂದುವ ವ್ಯಕ್ತಿಯನ್ನು ನೀವು ಹೇಗೆ ಚುನಾಯಿಸುತ್ತೀರಿ? ಎಲ್ಲೆಲ್ಲ ಬಿಜೆಪಿಯ ಹಿರಿಯ ನಾಯಕರು ಸ್ಪರ್ಧಿಸುತ್ತಿದ್ದಾರೊ, ಅಲ್ಲೆಲ್ಲ ವಿರೋಧ ಪಕ್ಷದ ನಾಯಕರನ್ನು ನಾಮಪತ್ರ ಸಲ್ಲಿಸುವುದರಿಂದ ತಡೆಯಲಾಗಿದೆ. ಬಿಜೆಪಿಯ ಅಭ್ಯರ್ಥಿಯೊಬ್ಬರು ಹೈದರಾಬಾದ್ ನಲ್ಲಿ ಮಹಿಳೆಯರ ಬುರ್ಖಾ ತೆಗೆದು, ಅವರ ಗುರುತನ್ನು ಪರಿಶೀಲಿಸುತ್ತಿರುವುದನ್ನು ಕಂಡೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಹೀಗೇನಾ?” ಎಂದೂ ಖರ್ಗೆ ಪ್ರಶ್ನಿಸಿದರು.
ನಂತರ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಪತ್ರಿಕಾ ಸ್ವಾತಂತ್ರ್ಯದ ದಿನವು ಜೂನ್ 4ರಂದು ಉದ್ಘಾಟನೆಗೊಳ್ಳುವುದರಿಂದ ನಾನು ಮಾಧ್ಯಮ ಮಂದಿಯನ್ನು ಅಭಿನಂದಿಸಲು ಬಯಸುತ್ತೇನೆ. ಬಿಜೆಪಿ ತನ್ನದೇ ಆದ ನಕಾರಾತ್ಮಕ ನಿರೂಪಣೆಯ ಸುಳಿಯಲ್ಲಿ ಸಿಲುಕಿಕೊಂಡಿದೆ. ಉತ್ತರ ಪ್ರದೇಶದಲ್ಲಿ 79 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಲಿದ್ದು, ಡೋಲಾಯಮಾನ ಸ್ಥಿತಿಯಲ್ಲಿರುವ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಎದುರಿಸುತ್ತಿದೆ” ಎಂದು ಹೇಳಿದರು.