ಅಮೆರಿಕಾದಲ್ಲಿ ಮಾಧ್ಯಮಗಳು ಪಕ್ಷಪಾತೀಯವಾಗಿದೆ ಎಂದು ಟ್ರೋಲ್ ಗೆ ಒಳಗಾದ ಇಂಡಿಯಾ ಟುಡೇ ನಿರೂಪಕ ರಾಹುಲ್ ಕನ್ವಾಲ್
ಇಂಡಿಯಾ ಟುಡೇ ವಾಹಿನಿಯ ನಿರೂಪಕ ರಾಹುಲ್ ಕನ್ವಾಲ್ | Screengrab:x/@rahulkanwal
ಹೊಸದಿಲ್ಲಿ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಯುಎಸ್ ಮಾಧ್ಯಮಗಳು ಪಕ್ಷಪಾತೀಯವಾಗಿತ್ತು ಎಂದು ಹೇಳಿಕೆ ನೀಡಿದ ಬಳಿಕ ಇಂಡಿಯಾ ಟುಡೇ ವಾಹಿನಿಯ ನಿರೂಪಕ ರಾಹುಲ್ ಕನ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಇಂಡಿಯಾ ಟುಡೇ ವಾಹಿನಿಯ ನಿರೂಪಕ ರಾಹುಲ್ ಕನ್ವಾಲ್, CNN ಮತ್ತು FOX NEWSನ್ನು ಉದಾಹರಣೆಯನ್ನಾಗಿಟ್ಟುಕೊಂಡು ಪೋಸ್ಟ್ ಮಾಡಿದ್ದರು. ಕಮಲಾ ಹ್ಯಾರಿಸ್ ಪರವಾಗಿ ಸಿಎನ್ಎನ್ ತೋರಿಸಿದೆ. ಫಾಕ್ಸ್ ನ್ಯೂಸ್ ಡೊನಾಲ್ಡ್ ಟ್ರಂಪ್ ಪರವಾಗಿರುವಂತೆ ತೋರಿಸಿದೆ. ಇದರಿಂದ ವೀಕ್ಷಕರು ಯಾವ ಚಾನಲ್ ನೈಜ ಸನ್ನಿವೇಶವನ್ನು ಬಿತ್ತರಿಸುತ್ತದೆ ಎಂಬ ಬಗ್ಗೆ ಗೊಂದಲಕ್ಕೊಳಗಾಗಬಹುದು. ಪತ್ರಕರ್ತರು ವೈಯಕ್ತಿಕ ಹಿತಾಸಕ್ತಿಗಳನ್ನು ಬಿಟ್ಟು ವಾಸ್ತವವನ್ನು ಬಿತ್ತರಿಸುವ ಗುರಿಯನ್ನು ಹೊಂದಬೇಕು ಎಂದು ಕನ್ವಾಲ್ ತನ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಕನ್ವಾಲ್ ಅವರ ಪೋಸ್ಟ್ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಟೀಕೆಗೆ ಗುರಿಯಾಗಿದೆ. ಇಂಡಿಯಾ ಟುಡೇ ಬಿಜೆಪಿ ಪರವಾಗಿದೆ ಎಂದು ಕೆಲವರು ಟೀಕಿಸಿದ್ದಾರೆ. ಕನ್ವಾಲ್ ಅವರ ಪೋಸ್ಟ್ ಡಬಲ್ ಸ್ಟ್ಯಾಂಡರ್ಡ್ ನಿಂದ ಕೂಡಿದೆ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಟೀಕಿಸಿದ್ದಾರೆ.
ಇಂಡಿಯಾ ಟುಡೆಯ ವೀಕ್ಷಕರೋರ್ವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಾ, ಮೋದಿ ಭಾರತದಲ್ಲಿ ಮಾತ್ರವಲ್ಲದೆ ಯುಎಸ್ ಮತ್ತು ಕೆನಡಾದಲ್ಲಿಯೂ ಮೋದಿ ಗೆಲ್ಲುತ್ತಿದ್ದಾರೆ ಎಂದು ಒಬ್ಬರು ಭಾವಿಸುತ್ತಾರೆ ಎಂದು ಚಾನೆಲ್ ನ ಬಿಜೆಪಿ ಪರ ಒಲವನ್ನು ಅಪಹಾಸ್ಯ ಮಾಡಿದ್ದಾರೆ.
ಪತ್ರಕರ್ತರು ಸುದ್ದಿಮನೆಯ ಹೊರಗೆ ವೈಯಕ್ತಿಕ ಪಕ್ಷಪಾತಗಳನ್ನು ಬಿಡಬೇಕು ಎಂದು ಅವರು ನಿಜವಾಗಿಯೂ ನಂಬಿದ್ದರೆ ಸ್ವತಃ ಅವರೇ ಅದನ್ನು ಪ್ರಾರಂಭಿಸಬೇಕು ಎಂದು ಇನ್ನೋರ್ವರು ಕಮೆಂಟ್ ಮಾಡಿದ್ದಾರೆ.
ಕನ್ವಾಲ್ ಅವರೇ ಪಕ್ಷಪಾತೀಯವಾಗಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣದ ಬಳಕೆದಾರರು ಟೀಕಿಸಿದ್ದು, ಅಮೆರಿಕದ ಪತ್ರಕರ್ತರ ಬಗ್ಗೆ ಅವರ ವಿಮರ್ಶೆಯ ಬಗೆಗಿನ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಅಮೆರಿಕದ ಮಾಧ್ಯಮದ ಬಗ್ಗೆ ಕನ್ವಾಲ್ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣದ ಬಳಕೆದಾರರೋರ್ವರು ಸ್ವಂತ ದೇಶದ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ವಿದೇಶದ ಬಗ್ಗೆ ಯಾಕೆ ಕಾಳಜಿ ವಹಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ನೀವು ಪ್ರೇಕ್ಷಕರನ್ನು ಮೂರ್ಖರನ್ನಾಗಿಸುವ ಬದಲು, ನೀವು ಮೊದಲು ನಿಮ್ಮ ಸ್ವಂತ ಕೆಲಸವನ್ನು ಪ್ರಾಮಾಣಿಕವಾಗಿ ಏಕೆ ಮಾಡಬಾರದು ಎಂದು ಕೆಲವರು ಪ್ರಶ್ನಿಸಿದ್ದಾರೆ.