ಮೇ 10ರೊಳಗೆ ಭಾರತೀಯ ಸೇನೆ ಪೂರ್ಣ ಸ್ಥಳಾಂತರ: ಮಾಲ್ಡೀವ್ಸ್ ಗಡುವು
Photo: twitter
ಹೊಸದಿಲ್ಲಿ: ಭಾರತದ ಎರಡು ನೌಕಾ ಹೆಲಿಕಾಪ್ಟರ್ಗಳು ಮತ್ತು ಡೋರ್ನಿಯರ್ ವಿಮಾನದ ಎರಡು ವೈಮಾನಿಕ ಪ್ಲಾಟ್ ಫಾರಂಗಳನ್ನು ಉಳಿಸಿಕೊಳ್ಳಲು ಮಾಲ್ಡೀವ್ಸ್ ಒಪ್ಪಿಗೆ ನೀಡಿದೆ. ಆದರೆ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿರುವ ತನ್ನೆಲ್ಲ ಸೇನಾ ಸಿಬ್ಬಂದಿಯನ್ನು ಮೇ 10ರೊಳಗೆ ಸ್ಥಳಾಂತರಿಸಬೇಕು ಎಂದು ಗಡುವುದು ವಿಧಿಸಿದೆ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಉನ್ನತ ಮಟ್ಟದ ಪ್ರಮುಖ ಗುಂಪು ನಡೆಸಿದ ಸಭೆಯ ಬಳಿಕ ಮಾಲೆ ಈ ಹೇಳಿಕೆಯನ್ನು ಪೋಸ್ಟ್ ಮಾಡಿದೆ.
ಭಾರತದ ವೈಮಾನಿಕ ಪ್ಲಾಟ್ ಫಾರಂಗಳ ಕಾರ್ಯಾಚರಣೆಯನ್ನು ಮುಂದುವರಿಸಲು ಅವಕಾಶ ನೀಡುವ ಪರಸ್ಪರ ಕಾರ್ಯಸಾಧು ಪರಿಹಾರಗಳನ್ನು ಕಂಡುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಭಾರತ ಹೇಳಿಕೆ ನೀಡಿದೆ. ಆದರೆ ಒಂದು ಪ್ಲಾಟ್ ಫಾರಂನಲ್ಲಿರುವ ಸೇನಾ ಸಿಬ್ಬಂದಿಯನ್ನು ಮಾರ್ಚ್ 10ರೊಳಗೆ ಹಾಗೂ ಉಳಿದ ಪ್ಲಾಟ್ ಫಾರಂಗಳ ಸಿಬ್ಬಂದಿಯನ್ನು ಮೇ 10ರೊಳಗೆ ಸ್ಥಳಾಂತರಿಸಲು ಒಪ್ಪಿಕೊಂಡಿದೆ ಎಂದು ಮಾಲೆ ಸ್ಪಷ್ಟಪಡಿಸಿದೆ.
ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರ ನಿರಂತರ ಬೇಡಿಕೆ ಬಳಿಕ ತನ್ನ ಸೇನಾ ಸಿಬ್ಬಂದಿಯನ್ನು ವಾಪಾಸು ಕರೆಸಿಕೊಳ್ಳಲು ಭಾರತ ಒಪ್ಪಿಕೊಂಡಂತಾಗಿದೆ. ಆದರೆ ಸ್ಥಳಾಂತರ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಕಾಣಿಸುತ್ತಿಲ್ಲ. ಭಾರತೀಯ ನಾಗರಿಕರನ್ನು ಮತ್ತು ನಿವೃತ್ತ ಯೋಧರನ್ನು ಕೂಡಾ ವಾಪಾಸು ಕರೆಸಿಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಈ ಪ್ಲಾಟ್ ಫಾರಂಗಳು ಮಾಲ್ಡೀವ್ಸ್ ಗೆ ಮಾನವೀಯ ಮತ್ತು ವಿಹಾರದ ನೆರವನ್ನು ನೀಡುತ್ತಿವೆ.
ಮಾಲ್ಡೀವ್ಸ್ ನೆಲದಲ್ಲಿ ಯಾವುದೇ ವಿಧದ ಭಾರತೀಯ ಸೇನಾ ಅಸ್ತಿತ್ವವು ತಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮುಯಿಝ್ಝು ಈ ಹಿಂದೆ ಎಚ್ಚರಿಸಿದ್ದರು. ಭಾರತ ತನ್ನ ಸೇನೆಯನ್ನು ಹಿಂಪಡೆಯಬೇಕು ಎನ್ನುವುದು ಮಾಲ್ಡೀವ್ಸ್ ಜನತೆಯ ಪ್ರಜಾಸತ್ತಾತ್ಮಕ ಆಶಯ ಎಂದು ಸ್ಪಷ್ಟಪಡಿಸಿದ್ದರು.