ನೇಪಾಳದಲ್ಲಿ ನದಿಗೆ ಉರುಳಿ ಬಿದ್ದ ಭಾರತದ ಬಸ್: ಮೃತರ ಸಂಖ್ಯೆ 26ಕ್ಕೆ ಏರಿಕೆ
PC : ANI
ಕಠ್ಮಂಡು: 43 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಭಾರತದ ಬಸ್ ಒಂದು ನೇಪಾಳದ ತನಾಹುನ್ ಜಿಲ್ಲೆಯಲ್ಲಿರುವ ಮಾರ್ಸ್ಯಂಗ್ಡಿ ನದಿಗೆ ಶುಕ್ರವಾರ ಉರುಳಿ ಬಿದ್ದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಕನಿಷ್ಠ ಪಕ್ಷ 26 ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 43 ಪ್ರಯಾಣಿಕರ ಪೈಕಿ 17 ಮಂದಿ ಪುರುಷರು, 26 ಮಂದಿ ಮಹಿಳೆಯರಿದ್ದರು. ಈ ಪೈಕಿ 41 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶ ಪರಿಹಾರ ಇಲಾಖೆ ತಿಳಿಸಿದೆ.
ಈ ಪೈಕಿ 11 ಮಂದಿಯನ್ನು ಕಠ್ಮಂಡು ಮೂಲದ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಸಾಗಿಸಲಾಗಿದ್ದು, ಉಳಿದ 4 ಮಂದಿಯನ್ನು ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿದೆ. ಬದುಕುಳಿದಿರುವವರ ಪೈಕಿ 8 ಮಂದಿಯ ವಾಸಸ್ಥಳ ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.
ಅಪಘಾತಕ್ಕೀಡಾದ ಬಸ್ ಚಲಾಯಿಸುತ್ತಿದ್ದ ಚಾಲಕ ಮುಸ್ತಫಾ ಖಾನ್ ಹಾಗೂ ನಿರ್ವಾಹಕ ರಾಮ್ ಜೀತ್ ಅಲಿಯಾಸ್ ಮುನ್ನಾ ಇಬ್ಬರೂ ಈ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಸ್ ನದಿ ದಡದಲ್ಲಿ ಬಿದ್ದಿದೆ ಎಂದು ತನಾಹುನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ರಾಯ ತಿಳಿಸಿದ್ದಾರೆ.
ಸಂಖ್ಯಾ ಫಲಕ UP FT 7623 ಹೊಂದಿರುವ ಬಸ್ ನದಿಗೆ ಉರುಳಿ ಬಿದ್ದಿದ್ದು, ನದಿಯ ದಡದಲ್ಲಿ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ಈ ಬಸ್ ಪೋಖರಾದಿಂದ ಕಠ್ಮಂಡುಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ಪೌಡೆಲ್ ನೇತೃತ್ವದಲ್ಲಿ 45 ಮಂದಿ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿದರು.