ʼಸಂವಿಧಾನ ಸಂಘ ಪರಿವಾರದ ನಿಯಮ ಪುಸ್ತಕವಲ್ಲʼ: ಲೋಕಸಭೆಯಲ್ಲಿ ಬಿಜೆಪಿ, ಆರೆಸ್ಸೆಸ್ ವಿರುದ್ಧ ಪ್ರಿಯಾಂಕ ವಾಗ್ದಾಳಿ
Photo | PTI
ಹೊಸದಿಲ್ಲಿ: ಭಾರತದ ಸಂವಿಧಾನವು ಸಂಘ ಪರಿವಾರದ ನಿಯಮ ಪುಸ್ತಕವಲ್ಲ ಎಂದು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ, ಸಂಭಾಲ್ ಮತ್ತು ಮಣಿಪುರ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದಾರೆ. ಸಂವಿಧಾನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಯಮ ಪುಸ್ತಕವಲ್ಲ ಎಂಬುವುದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಂಡಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾತ್ಮಕ ಕವಚವಾಗಿದೆ. ಆದರೆ ಬಿಜೆಪಿ ನೇತೃತ್ವದ ಸರಕಾರ ಅದನ್ನು ಮುರಿಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಮ್ಮ ಸಂವಿಧಾನವು ನಮ್ಮ ಸುರಕ್ಷಾ ಕವಚವಾಗಿದೆ, ಇದು ನಾಗರಿಕರನ್ನು ಸುರಕ್ಷಿತವಾಗಿರಿಸುತ್ತದೆ. ಆದರೆ 10 ವರ್ಷಗಳಲ್ಲಿ ಆಡಳಿತ ಪಕ್ಷದ ನಾಯಕರು ಈ 'ಕವಚ'ವನ್ನು ಒಡೆಯುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಜನರು ಜಾತಿ ಗಣತಿಗೆ ಒತ್ತಾಯಿಸುತ್ತಿದ್ದಾರೆ, ಕೇಂದ್ರ ಸಚಿವ ರಾಮದಾಸ್ ಅಠವಳೆ ಕೂಡ ಇದಕ್ಕೆ ಬೆಂಬಲಿಸಿದ್ದಾರೆ. ಜಾತಿ ಗಣತಿ ಅತ್ಯಗತ್ಯ ಆದ್ದರಿಂದ ನಾವು ಪ್ರತಿಯೊಬ್ಬರ ಸ್ಥಿತಿಗತಿ ಮತ್ತು ಅದಕ್ಕೆ ಅನುಗುಣವಾಗಿ ನೀತಿಗಳನ್ನು ರೂಪಿಸಬಹುದು ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.