ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆ | ಅರ್ಜಿ ಸಲ್ಲಿಸಿದ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಅಮಿತ್ ಶಾ!
ರಾಹುಲ್ ದ್ರಾವಿಡ್ | PC: © BCCI
ಹೊಸದಿಲ್ಲಿ: ರಾಹುಲ್ ದ್ರಾವಿಡ್ ರ ಮುಖ್ಯ ತರಬೇತುದಾರ ಹುದ್ದೆಯ ಅವಧಿ 2024ರ ಟಿ-20 ವಿಶ್ವಕಪ್ ನಂತರ ಅಂತ್ಯಗೊಳ್ಳಲಿದ್ದು, ಅವರು ತೆರವುಗೊಳಿಸಲಿರುವ ಹುದ್ದೆಗೆ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್ ಹಾಗೂ ಅಮಿತ್ ಶಾ ಸೇರಿದಂತೆ 3,000 ಮಂದಿ ಅರ್ಜಿ ಸಲ್ಲಿಸಿದ್ದಾರೆ!
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್ ಹಾಗೂ ಅಮಿತ್ ಶಾ ಹೆಸರಿನವರೂ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ತರಬೇತುದಾರ ಹುದ್ದೆಗೆ ಸಾರ್ವಜನಿಕ ಪ್ರಕಟಣೆಯ ಮೂಲಕ ಅರ್ಜಿಯನ್ನು ಆಹ್ವಾನಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿದ್ದರಿಂದ, ಮೇಲಿನ ಮೂವರ ಹೆಸರಿನ ಅಭ್ಯರ್ಥಿಗಳೂ ತಮ್ಮ ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕರ ನಡುವೆ ತಮಾಷೆಯ ವಿಷಯವಾಗಿ ಬದಲಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ಅರ್ಜಿ ಸಲ್ಲಿಸಲು ನಿನ್ನೆ (ಸೋಮವಾರ) ಕೊನೆಯ ದಿನವಾಗಿತ್ತು. ತಮಾಷೆಯ ಸಂಗತಿಯೆಂದರೆ, ಭಾರತ ತಂಡದ ಮಾಜಿ ಆಟಗಾರರಾದ ತೆಂಡೂಲ್ಕರ್, ಧೋನಿ, ಹರ್ಭಜನ್ ಸಿಂಗ್ ಹಾಗೂ ವಿರೇಂದ್ರ ಸೆಹ್ವಾಗ್ ಹೆಸರಿನ ಒಂದಕ್ಕಿಂತ ಹೆಚ್ಚು ಅರ್ಜಿಗಳು ಮುಖ್ಯ ತರಬೇತುದಾರ ಹುದ್ದೆಗೆ ಸಲ್ಲಿಕೆಯಾಗಿವೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರಿನ ಅಭ್ಯರ್ಥಿಗಳ ಹೆಸರಗಳೂ ಪಟ್ಟಿಯಲ್ಲಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ಕಳೆದ ಬಾರಿ ಕೂಡಾ ಬಿಸಿಸಿಐನ ಪ್ರಕಟಣೆಗೆ ಇಂತಹ ಸೋಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು. ಈ ಬಾರಿ ಕೂಡಾ ಅದೇ ಪುನರಾವರ್ತನೆಗೊಂಡಿದೆ. ಗೂಗಲ್ ಅರ್ಜಿಯಲ್ಲಿ ಬಿಸಿಸಿಐ ಅರ್ಜಿಯನ್ನು ಆಹ್ವಾನಿಸಲು ಪ್ರಮುಖ ಕಾರಣ, ಅಭ್ಯರ್ಥಿಗಳ ಹೆಸರುಗಳನ್ನು ಒಂದೇ ಪಟ್ಟಿಯಲ್ಲಿ ಪರಿಶೀಲಿಸಲು ಸಾಧ್ಯ ಎಂದು” ಎಂದು ಹೇಳಿದ್ದಾರೆ.