ಭಾರತ ಸರಕಾರ ಅಲ್ಪಸಂಖ್ಯಾತರ ವಿರುದ್ಧ ದೂಷಣೆ, ತಾರತಮ್ಯ ಮುಂದುವರಿಸಿದೆ : ಹ್ಯೂಮನ್ ರೈಟ್ಸ್ ವಾಚ್
Photo : www.hrw.org
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಧಾರ್ಮಿಕ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದೂಷಣೆ ಮತ್ತು ತಾರತಮ್ಯದ ನೀತಿಗಳನ್ನು 2023ರಲ್ಲಿಯೂ ಮುಂದುವರಿಸಿದೆ ಎಂದು ಅಂತರರಾಷ್ಟ್ರೀಯ ಎನ್ಜಿಒ ಹ್ಯೂಮನ್ ರೈಟ್ಸ್ ವಾಚ್ (ಎಚ್ಆರ್ಡಬ್ಲ್ಯು) ಗುರುವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.
ಇದು ಮಣಿಪುರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕೋಮು ಹಿಂಸಾಚಾರದ ಘಟನೆಗಳು ಹೆಚ್ಚಲು ಕಾರಣವಾಗಿದೆ. ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳಲ್ಲಿ ನೂರಾರು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೋಲಿಸರು ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣಗಳ ಸೂಕ್ತ ತನಿಖೆ ನಡೆಸುವುದಿಲ್ಲ. ಬದಲಿಗೆ ಪೋಲಿಸ್ ಅಧಿಕಾರಿಗಳು ತಮ್ಮ ವಿರುದ್ಧ ದೌರ್ಜನ್ಯವನ್ನು ಪ್ರತಿಭಟಿಸಿದವರು ಸೇರಿದಂತೆ ಸಂತ್ರಸ್ತ ಸಮುದಾಯವನ್ನು ಸಾರಾಸಗಟಾಗಿ ದಂಡಿಸುವ ಮೂಲಕ ಇಂತಹ ಘಟನೆಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ಎಚ್ಆರ್ಡಬ್ಲ್ಯು ಹೇಳಿದೆ.
ಕಳೆದ ವರ್ಷದ ಜು.31ರಂದು ಹರ್ಯಾಣದ ನುಹ್ನಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರವನ್ನು ನಿದರ್ಶನವನ್ನಾಗಿ ಅದು ನೀಡಿದೆ.
ನೂಹ್ ನಲ್ಲಿ ಬಜರಂಗ ದಳ ಮತ್ತು ವಿಹಿಂಪ ಆಯೋಜಿಸಿದ್ದ ಬೃಜ್ ಮಂಡಳ ಜಲಾಭಿಷೇಕ ಯಾತ್ರೆ ಸಂದರ್ಭದಲ್ಲಿ ಹಿಂದುಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು, ಅದು ತ್ವರಿತವಾಗಿ ಇತರ ಪ್ರದೇಶಗಳಿಗೂ ಹರಡಿತ್ತು. ಗುರುಗ್ರಾಮದಲ್ಲಿ ದಾಂಧಲೆಗಿಳಿದಿದ್ದ ಹಿಂದು ಗುಂಪುಗಳು ಮಸೀದಿಯೊಂದಕ್ಕೆ ಬೆಂಕಿ ಹಚ್ಚಿದ್ದು, ಅದರ ಸಹಾಯಕ ಇಮಾಮ್ರನ್ನು ಹತ್ಯೆಮಾಡಿದ್ದವು. ಮರುದಿನ ಮುಸ್ಲಿಮರಿಗೆ ಸೇರಿದ ಅಂಗಡಿಗಳು ಮತ್ತು ಮುಸ್ಲಿಂ ವಲಸೆ ಕಾರ್ಮಿಕರ ರೆಪಡಿಗಳಿಗೂ ಬೆಂಕಿ ಹಚ್ಚಲಾಗಿತ್ತು.
ಹಿಂಸಾಚಾರದ ಬಳಿಕ ಹೆಚ್ಚುತ್ತಿರುವ ಪ್ರವೃತ್ತಿಗೆ ಅನುಗುಣವಾಗಿ ಮುಸ್ಲಿಮ್ ನಿವಾಸಿಗಳ ವಿರುದ್ಧ ಪ್ರತೀಕಾರದ ಕ್ರಮವನ್ನು ಕೈಗೊಂಡಿದ್ದ ಅಧಿಕಾರಿಗಳು ಮುಸ್ಲಿಮರ ನೂರಾರು ಆಸ್ತಿಗಳನ್ನು ಕಾನೂನುಬಾಹಿರವಾಗಿ ನೆಲಸಮಗೊಳಿಸಿದ್ದರು ಮತ್ತು ಹಲವಾರು ಮುಸ್ಲಿಮ್ ಪುರುಷರು ಮತ್ತು ಬಾಲಕರನ್ನು ಬಂಧಿಸಿದ್ದರು ಎಂದು ಹೇಳಿರುವ ವರದಿಯು, ಈ ನೆಲಸಮ ಕಾರ್ಯಾಚರಣೆಯು ಸರಕಾರವು ‘ಜನಾಂಗೀಯ ಶುದ್ಧೀಕರಣ ’ವನ್ನು ನಡೆಸುತ್ತಿದೆಯೇ ಎಂದು ಪಂಜಾಬ್ ಮತ್ತು ಹರ್ಯಾಣ ಉಚ್ಛ ನ್ಯಾಯಾಲಯವು ಪ್ರಶ್ನಿಸಲು ಕಾರಣವಾಗಿತ್ತು ಎಂದು ತಿಳಿಸಿದೆ.