ಮಹಿಳಾ ಟೆಕ್ಕಿ ಆತ್ಮಹತ್ಯೆ: ಆಸ್ಟ್ರೇಲಿಯಾ ಸುಪರ್ದಿಯಲ್ಲಿರುವ ಮಕ್ಕಳ ಹಸ್ತಾಂತರಕ್ಕಾಗಿ ಬೆಳಗಾವಿ ಕುಟುಂಬದ ಹೋರಾಟ
ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಪ್ರಿಯದರ್ಶಿನಿ ಪಾಟೀಲ್ ಎಂಬ 40 ವರ್ಷದ ಮಹಿಳೆಯು ಕಳೆದ ವಾರ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಆಗಸ್ಟ್ 27ರಂದು ಬೆಳಗಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರ ಬೆನ್ನಿಗೇ ಆಕೆಯ ಕುಟುಂಬದ ಸದಸ್ಯರು ಆಕೆಯ ಇಬ್ಬರು ಮಕ್ಕಳ ಹಸ್ತಾಂತರಕ್ಕಾಗಿ ಆಸ್ಟ್ರೇಲಿಯ ಸರ್ಕಾರದೊಂದಿಗೆ ಹೋರಾಟ ನಡೆಸುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಪ್ರಕರಣದಿಂದ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಭಾರತೀಯ ಮೂಲದ ಪೋಷಕರು ತಮ್ಮ ಮಕ್ಕಳನ್ನು ವಶಕ್ಕೆ ಪಡೆಯಲು ಎದುರಿಸುತ್ತಿರುವ ಸಮಸ್ಯೆಯು ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಿಯದರ್ಶಿನಿ ಪಾಟೀಲ್ ಅವರ ಕುಟುಂಬವು ಕಳೆದ ಮೂರು ವರ್ಷಗಳಿಂದ ತಮ್ಮ ಮಕ್ಕಳ ಹಸ್ತಾಂತರಕ್ಕಾಗಿ ಹೋರಾಡುತ್ತಿದ್ದು, ಇದಕ್ಕೂ ಮುನ್ನ, ಪ್ರಿಯದರ್ಶಿನಿ ಪಾಟೀಲ್ ಹಾಗೂ ಆಕೆಯ ಪತಿಯ ಅಸಮರ್ಪಕ ಆರೈಕೆಯ ಕಾರಣಕ್ಕೆ ಆಸ್ಟ್ರೇಲಿಯಾ ಪ್ರಜೆಗಳಾಗಿರುವ ಅವರ ಇಬ್ಬರು ಮಕ್ಕಳನ್ನು ಬೇರ್ಪಡಿಸಲಾಗಿದೆ ಎಂದು ‘ನ್ಯೂ ಸೌತ್ ವೇಲ್ಸ್’ ಅಧಿಕಾರಿಗಳು ಆರೋಪಿಸಿದ್ದರು.
ಈ ತಿಂಗಳ ಆರಂಭದಲ್ಲಿ ತಮ್ಮ ತಂದೆಗೆ ನೆರವಾಗಲು ಪ್ರಿಯದರ್ಶಿನಿ ಪಾಟೀಲ್ ಭಾರತಕ್ಕೆ ಆಗಮಿಸಿದ್ದರು. ಒಂದು ವಾರದ ನಂತರ, ನ್ಯೂ ಸೌತ್ ವೇಲ್ಸ್ ನ ನ್ಯಾಯ ಇಲಾಖೆಯು ನನ್ನ ಕುಟುಂಬ ಹಾಗೂ ನನ್ನ ಜೀವನವನ್ನು ಹಾಳುಗೆಡವುತ್ತಿದೆ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಅವರ ಪುತ್ರನು ಜಠರದ ಉರಿಯೂತ ಹಾಗೂ ಅಲ್ಸರೇಟಿವ್ ಕೊಲಿಟಿಸ್ (Ulcerative colitis) ಎಂಬ ಕಾಯಿಲೆಯಿಂದ ಬಳಲುತ್ತಿದ್ದನು. ಆತನನ್ನು ನ್ಯೂ ಸೌತ್ ವೇಲ್ಸ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಆರು ತಿಂಗಳ ಕಾಲ ಆರೈಕೆ ಮಾಡಿದರೂ, ಆತನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಪೋಷಕರು ವೈದ್ಯಕೀಯ ವರ್ಗಾವಣೆಗೆ ಕೋರಿಕೆ ಸಲ್ಲಿಸಿದ್ದರು.
ಆದರೆ, ಆ ಮನವಿಯನ್ನು ತಿರಸ್ಕರಿಸಲಾಗಿತ್ತು ಹಾಗೂ ಮಕ್ಕಳ ರಕ್ಷಣೆ ಪ್ರಕರಣ ಮುನ್ನೆಲೆಗೆ ಬಂದಿತ್ತು ಎಂದು ವರದಿಯಾಗಿದೆ.
ಅಮರ್ತ್ಯನ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರದಿರಲು ಮನೆಯಲ್ಲಿ ಆತನಿಗೆ ಸಮರ್ಪಕ ಆರೈಕೆ ನೀಡಲಾಗಿಲ್ಲ ಎಂಬ ಅನಿಸಿಕೆ ಈ ಸಂದರ್ಭದಲ್ಲಿ ವ್ಯಕ್ತವಾಗಿತ್ತು. ಇದರ ಬೆನ್ನಿಗೇ ಪ್ರಿಯದರ್ಶಿನಿ ಪಾಟೀಲರ ಎರಡನೆಯ 18 ವರ್ಷ ವಯಸ್ಸಿನ ಪುತ್ರನನ್ನೂ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ಪಡೆದಿದ್ದರು.
ಶಿಷ್ಟಾಚಾರದ ಪ್ರಕಾರ, ಸಾಮಾಜಿಕ ಕಾರ್ಯಕರ್ತರು ಪೋಷಕರನ್ನು ಭೇಟಿಯಾಗಿ, ಮನೆಯ ಪರಿಸರವನ್ನು ತಪಾಸಣೆ ನಡೆಸಬೇಕಾಗುತ್ತದೆ. ಅದರಂತೆ ಆರು ಸಕಾರಾತ್ಮಕ ವರದಿಗಳು ಸಲ್ಲಿಕೆಯಾದರೂ, ಆ ವರದಿಗಳನ್ನು ಏಳನೆ ವರದಿಯ ಮೂಲಕ ತಳ್ಳಿ ಹಾಕಲಾಗಿತ್ತು. ಈ ವರದಿಯನ್ನು ಆಧರಿಸಿ, ಮಕ್ಕಳ ಕಲ್ಯಾಣ ಅಧಿಕಾರಿಗಳು ಪ್ರಿಯದರ್ಶಿನಿ ಪಾಟೀಲರ ಮಕ್ಕಳನ್ನು ತಮ್ಮ ವಶಕ್ಕೆ ಪಡೆದಿದ್ದರು.
ಇದರಿಂದ ಬೇಸತ್ತ ಪ್ರಿಯದರ್ಶಿನಿ, ಭಾರತಕ್ಕೆ ಮರಳಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ, ದಿಲ್ಲಿಯಲ್ಲಿನ ಆಸ್ಟ್ರೇಲಿಯಾ ರಾಯಭಾರ ಕಚೇರಿಯೆದುರು ಪ್ರತಿಭಟನೆಗಳು ನಡೆದಿದ್ದು, ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಈ ಆಗ್ರಹಕ್ಕೆ ಭಾರತ ಸರ್ಕಾರವೂ ದನಿಗೂಡಿಸಿದ್ದು, ವಿದೇಶಾಂಗ ಇಲಾಖೆಯ ಮೂಲಕ ಆಸ್ಟ್ರೇಲಿಯಾ ಸರ್ಕಾರವನ್ನು ಸಂಪರ್ಕಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಿಯದರ್ಶಿನಿ ಪಾಟೀಲರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳು ಹಾಗೂ ವ್ಯವಹಾರ ಇಲಾಖೆಯು, “ಆಸ್ಟ್ರೇಲಿಯಾ ಮಹಿಳೆಯು ಭಾರತದಲ್ಲಿ ಮೃತಪಟ್ಟಿರುವುದಕ್ಕೆ ತೀವ್ರ ದುಃಖವಾಗಿದೆ” ಎಂದು ಹೇಳಿದ್ದು, ಪ್ರಿಯದರ್ಶಿನಿ ಪಾಟೀಲರ ಕುಟುಂಬಕ್ಕೆ ರಾಯಭಾರ ನೆರವು ನೀಡಲಾಗುವುದು ಎಂದು ಆಶ‍್ವಾಸನೆ ನೀಡಿದೆ.
The Hindu ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಅಧಿಕಾರಿಗಳು ಪ್ರಕರಣದ ಪರಾಮರ್ಶೆ ಪ್ರಾರಂಭಿಸಿದ್ದು, ತಮ್ಮ ಪತ್ನಿಯ ಅಂತ್ಯಕ್ರಿಯೆ ನೆರವೇರಿಸಲು ಭಾರತಕ್ಕೆ ಮರಳಿರುವ ಪ್ರಿಯದರ್ಶಿನಿ ಪಾಟೀಲರ ಪತಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.