ಅಮೆರಿಕ | ತೆಲಂಗಾಣ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ
ಸಾಂದರ್ಭಿಕ ಚಿತ್ರ |PC : freepik.com
ಹೈದರಾಬಾದ್ : ಅಮೆರಿಕದ ಗ್ಯಾಸ್ ಸ್ಟೇಷನ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಮ್ಮ ಪುತ್ರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಶನಿವಾರ ತೆಲಂಗಾಣದ ಖಮ್ಮಮ್ ಜಿಲ್ಲೆಯ ಮೃತ ಯುವಕನ ಪೋಷಕರು ತಿಳಿಸಿದ್ದಾರೆ.
ಮೃತ ಯುವಕನನ್ನು ಸಾಯಿ ತೇಜ ನೂಕರಪು (22) ಎಂದು ಗುರುತಿಸಲಾಗಿದ್ದು, ಚಿಕಾಗೊದ ಬಳಿಯಿರುವ ಗ್ಯಾಸ್ ಸ್ಟೇಷನ್ ಒಂದರಲ್ಲಿ ಆತ ಕೆಲಸ ನಿರ್ವಹಿಸುವಾಗ, ಭಾರತೀಯ ಕಾಲಮಾನ ಶನಿವಾರ ಮುಂಜಾನೆಯಂದು ಹಂತಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಅಮೆರಿಕದಿಂದ ಸ್ವೀಕರಿಸಿರುವ ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಭಾರತ ರಾಷ್ಟ್ರೀಯ ಸಮಿತಿ(BRS)ಯ ವಿಧಾನ ಪರಿಷತ್ ಸದಸ್ಯ ಮಧುಸೂದನ್ ತಾತಾ ತಿಳಿಸಿದ್ದಾರೆ.
ಖಮ್ಮಮ್ ನಲ್ಲಿರುವ ಮೃತ ಯುವಕನ ಪೋಷಕರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಮಾತನಾಡಿದ ಮಧುಸೂದನ್ ತಾತಾ, ಘಟನೆ ನಡೆದಾಗ ಸಾಯಿ ತೇಜಾ ಕರ್ತವ್ಯ ನಿರತನಾಗಿರಲಿಲ್ಲ. ಆದರೆ, ತನ್ನ ಸ್ನೇಹಿತನ ಕೋರಿಕೆಯ ಮೇರೆಗೆ ಆತನಿಗೆ ಸಹಾಯ ಮಾಡಲು ಆತನೊಂದಿಗೆ ಕೆಲ ಸಮಯವಿದ್ದ. ಘಟನೆ ನಡೆದಾಗ ಆತನ ಸ್ನೇಹಿತ ಬೇರೆ ಕೆಲಸದ ಮೇಲೆ ಹೊರಗೆ ಹೋಗಿದ್ದ ಎಂದು ಹೇಳಿದ್ದಾರೆ.
ಭಾರತದಲ್ಲಿ ಬಿಬಿಎ ಮುಗಿಸಿದ್ದ ಸಾಯಿ ತೇಜ, ಅಮೆರಿಕದಲ್ಲಿ ಎಂಬಿಎ ವ್ಯಾಸಂಗ ಮುಂದುವರಿಸಿದ್ದರು ಎಂದು ಹೇಳಲಾಗಿದೆ. ಮೃತ ಯುವಕನು ಅಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಿಸುತ್ತಿದ್ದ ಎಂದು ಆತನ ಸಂಬಂಧಿಕರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಘಟನೆಯಲ್ಲಿ ನೆರವು ನೀಡುವಂತೆ ನಾನು ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೆರಿಕ ಸದಸ್ಯರಿಗೆ ಮನವಿ ಮಾಡಿದ್ದೇನೆ. ಯುವಕನ ಮೃತ ದೇಹವು ಮುಂದಿನ ವಾರ ಭಾರತ ತಲುಪುವ ನಿರೀಕ್ಷೆ ಇದೆ ಎಂದು ಮಧುಸೂದನ್ ತಾತಾ ಹೇಳಿದ್ದಾರೆ.