ಸೈಬರ್ ಅಪರಾಧಿಗಳಿಂದಾಗಿ ಪ್ರತಿ ನಿಮಿಷಕ್ಕೆ 1.5 ಲಕ್ಷ ರೂ.ಕಳೆದುಕೊಳ್ಳುತ್ತಿರುವ ಭಾರತೀಯರು!
ಸಾಂದರ್ಭಿಕ ಚಿತ್ರ (Credit: Meta AI)
ಹೊಸದಿಲ್ಲಿ: ಭಾರತದಲ್ಲಿ ನಾಗರಿಕರು ಸೈಬರ್ ಅಪರಾಧಿಗಳಿಂದಾಗಿ ಪ್ರತಿ ನಿಮಿಷಕ್ಕೆ 1.3 ಲಕ್ಷ ರೂ.ಗಳಿಂದ 1.5 ಲಕ್ಷ ರೂ.ವರೆಗೆ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಈ ಪೈಕಿ ಕೇವಲ ಶೇ.20ಕ್ಕಿಂತ ಕಡಿಮೆ ಹಣವನ್ನು ವಶಪಡಿಸಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳಿಗೆ ಸಾಧ್ಯವಾಗುತ್ತಿದೆ ಎಂದು thehindu.com ವರದಿ ಮಾಡಿದೆ.
ಹೈದರಾಬಾದ್ನ ಮಾದಾಪುರದಲ್ಲಿ ಶನಿವಾರ ನಡೆದ ಐಎಸ್ಎಸಿಎ ವಾರ್ಷಿಕ ಸೈಬರ್ ಭದ್ರತಾ ಸಮ್ಮೇಳನದಲ್ಲಿ ತೆಲಂಗಾಣ ಐಟಿ ಮತ್ತು ಇಲೆಕ್ಟ್ರಾನಿಕ್ಸ್ ಇಲಾಖೆಯ ಉಪ ಕಾರ್ಯದರ್ಶಿ ಭವೇಶ ಮಿಶ್ರಾ ಅವರು ಈ ಅಂದಾಜುಗಳನ್ನು ಹಂಚಿಕೊಂಡರು.
ಸೈಬರ್ ಅಪರಾಧಗಳ ಕ್ರಿಯಾತ್ಮಕ ಸ್ವರೂಪದ ಬಗ್ಗೆ ಒತ್ತಿ ಹೇಳಿದ ಸೈಬರಾಬಾದ್ ಪೋಲಿಸ್ ಆಯುಕ್ತ ಅವಿನಾಶ ಮೊಹಂತಿ,ಸರಕಾರ ಮತ್ತು ಉದ್ಯಮಗಳ ನಡುವೆ ಸಮನ್ವಯೊಂದಿಗೆ ನಿಯಂತ್ರಣ ವ್ಯವಸ್ಥೆಯನ್ನು ಚುರುಕುಗೊಳಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸಿದರು.
‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ(ಕೆವೈಸಿ)’ಕಾರ್ಯವಿಧಾನಗಳನ್ನು ಬಲಪಡಿಸುವಂತೆ, ಮೇಲ್ವಿಚಾರಣೆ ಮತ್ತು ಲೆಕ್ಕಪರಿಶೋಧನೆಯಲ್ಲಿ ಸುಧಾರಣೆಗಳನ್ನು ತರುವಂತೆ ಮತ್ತು ನಿಯಂತ್ರಣ ಕ್ರಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವಂತೆ ಬ್ಯಾಂಕುಗಳಿಗೆ ಕರೆ ನೀಡಿದ ಅವರು, ಒಂದೇ ವಿಳಾಸವನ್ನು ಮತ್ತು ಅದೇ ನಿರ್ದೇಶಕರನ್ನು ಹೊಂದಿರುವ ಹಲವಾರು ಕಂಪನಿಗಳು ಸೈಬರ್ ಅಪರಾಧಗಳಲ್ಲಿ ತೊಡಗಿಕೊಂಡಿರುವುದನ್ನು ಅನೇಕ ತನಿಖೆಗಳು ಬಹಿರಂಗಗೊಳಿಸಿವೆ. ಇದು ಭಾರತದಲ್ಲಿ ರೆಡಿಮೇಡ್ ಕಂಪನಿಗಳನ್ನು ಸೃಷ್ಟಿಸಿ ಅವುಗಳನ್ನು ವಂಚನೆ ಉದ್ದೇಶವನ್ನು ಹೊಂದಿರುವ ವ್ಯಕ್ತಿಗಳಿಗೆ ಹಸ್ತಾಂತರಿಸಿದಂತಿದೆ ಎಂದರು.
ಸಮ್ಮೇಳನದಲ್ಲಿ ಹಿರಿಯ ಅಧಿಕಾರಿಗಳು,ಬ್ಯಾಂಕರ್ಗಳು, ಸಲಹೆಗಾರರು ಮತ್ತು ತಂತ್ರಜ್ಞಾನ ತಜ್ಞರು ಸೇರಿದಂತೆ ಉದ್ಯಮದ ನಾಯಕರು ಭಾಗವಹಿಸಿದ್ದು,ಕೃತಕ ಬುದ್ಧಿಮತ್ತೆ(ಎಐ)ಯ ಯುಗದಲ್ಲಿ ಸೈಬರ್ ಭದ್ರತೆಯ ಭವಿಷ್ಯ ಹಾಗೂ ಡೇಟಾ ಗೋಪ್ಯತೆಯ ನಿರ್ವಹಣೆ ಮತ್ತು ರಕ್ಷಣಾ ಕಾರ್ಯತಂತ್ರಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.
ಭದ್ರತೆಯನ್ನು ‘ಕ್ರಿಯಾತ್ಮಕ ಅಗತ್ಯ’ವನ್ನಾಗಿ ಸೇರಿಸಬೇಕು ಎಂದು ಒತ್ತಿ ಹೇಳಿದ ಭಾರತ ಸರಕಾರದ ರಾಷ್ಟ್ರೀಯ ಭದ್ರತಾ ಮಂಡಳಿಯ ಜಂಟಿ ಕಾರ್ಯದರ್ಶಿ ಜಿ.ನರೇಂದ್ರ ನಾಥ ಅವರು,ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಪ್ರಾಮಾಣಿಕ ಯುಆರ್ಎಲ್ಗಳು ಮತ್ತು ಅಪ್ಲಿಕೇಷನ್ಗಳನ್ನು ಗುರುತಿಸಲು ಸರಕಾರವು ಕೈಗೊಂಡಿರುವ ಕ್ರಮಗಳನ್ನು ಅವರು ವಿವರಿಸಿದರು.
ಬ್ಯಾಂಕುಗಳ ಹೆಸರಿನಲ್ಲಿ ಫಿಷಿಂಗ್ ದಾಳಿಗಳನ್ನು ತಪ್ಪಿಸುವ ಕುರಿತು ಮಾತನಾಡಿದ ನಾಥ್,ತಮ್ಮ ಕಸ್ಟಮರ್ ಕೇರ್ ನಂಬರಗಳು ಪ್ರಾಮಾಣಿಕವೆಂದು ಗುರುತಿಸುವಂತಾಗಲು ಅವುಗಳ ಆರಂಭದಲ್ಲಿ ‘160’ನ್ನು ಸೇರಿಸುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಮೂರಂಕಿಗಳ ಈ ಸಂಖ್ಯೆಯು 10 ಅಂಕಿಗಳ ಮೊಬೈಲ್ ಸಂಖ್ಯೆಯ ಭಾಗವಾಗಿರುತ್ತದೆ ಮತ್ತು ಸಂಖ್ಯೆಯನ್ನು ಹೊಂದಿರದ ಯಾವುದೇ ಕರೆಯನ್ನು ನಾಗರಿಕರು ಸ್ವೀಕರಿಸಬಾರದು ಎಂದು ಹೇಳಿದರು.
‘160’ ಅನ್ನು ಅನುಸರಿಸುವ ಬ್ಯಾಂಕ್ಗಳಿಗೆ ಪ್ರತ್ಯೇಕ ಸಂಖ್ಯೆಗಳನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ ಎಂದರು.
ಇದೇ ರೀತಿ ಯುಆರ್ಎಲ್ ಫಿಷಿಂಗ್ ವಂಚನೆಗಳನ್ನು ತಪ್ಪಿಸಲು ಭಾರತದ ಎಲ್ಲ ಬ್ಯಾಂಕುಗಳು ತಮ್ಮ ಯುಆರ್ಎಲ್ನಲ್ಲಿ bnk.in ಮತ್ತು ಹಣಕಾಸು ಸಂಸ್ಥೆಗಳು .fin.in ಅನ್ನು ಹೊಂದಿರಲಿವೆ. ಹೈದರಾಬಾದಿನ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರೀಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ (ಐಡಿಆರ್ಬಿಟಿ)ಯನ್ನು ಡೊಮೇನ್ನ ವಿಶೇಷ ರಿಜಿಸ್ಟ್ರಾರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ನಡುವೆ ಅ.1ರಿಂದ ಎಲ್ಲ ದೂರಸಂಪರ್ಕ ಕಂಪನಿಗಳು ಸಂದೇಶಗಳ (ಎಸ್ಎಂಎಸ್ ಸೇರಿದಂತೆ) ಮೂಲಕ ತಮ್ಮ ಗ್ರಾಹಕರಿಗೆ ಕಳುಹಿಸಲಾಗುವ ಲಿಂಕ್ಗಳನ್ನು ‘ವೈಟ್ ಲಿಸ್ಟ್’ ಮಾಡಲಿವೆ. ವೈಟ್ಲಿಸ್ಟ್ ಮಾಡಿರದ ಲಿಂಕ್ಗಳನ್ನು ಆಪರೇಟರ್ ಮಟ್ಟದಲ್ಲಿ ವಿಲೇವಾರಿ ಮಾಡಲಾಗುತ್ತದೆ ಮತ್ತು ಅವು ಗ್ರಾಹಕರನ್ನು ತಲುಪುವುದಿಲ್ಲ. ಇಂತಹ ಲಿಂಕ್ಗಳನ್ನು ಸಾಮಾನ್ಯವಾಗಿ ಬಲ್ಕ್ ಸಂದೇಶಗಳ ಮೂಲಕ ಕಳುಹಿಸಲಾಗುತ್ತದೆ ಮತ್ತು ಅವುಗಳನ್ನು ಕ್ಲಿಕ್ ಮಾಡಿದರೆ ಗ್ರಾಹಕರು ಸೈಬರ್ ವಂಚನೆಗೆ ಒಳಗಾಗಬಹುದು ಎಂದು ನಾಥ್ ವಿವರಿಸಿದರು.