ರಶ್ಯ ಸೇನೆಯಿಂದ 85 ಮಂದಿ ಭಾರತೀಯರ ಬಿಡುಗಡೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ
PC : X
ಹೊಸದಿಲ್ಲಿ: ರಶ್ಯ ಸೇನೆ ಸೇರ್ಪಡೆಯಾಗಿ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗಿಯಾಗಿದ್ದ 85 ಮಂದಿ ಭಾರತೀಯರನ್ನು ರಶ್ಯ ಸೇನೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸೋಮವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಇನ್ನೂ 20 ಮಂದಿ ಭಾರತೀಯರು ರಶ್ಯ ಸೇನೆಯಿಂದ ಬಿಡುಗಡೆಗೊಳ್ಳಬೇಕಿದ್ದು, ಅವರನ್ನೂ ಆದಷ್ಟೂ ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಭಾರತ ಮನವಿ ಮಾಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
“ಅಕ್ರಮವಾಗಿ ಅಥವಾ ಗುತ್ತಿಗೆ ಆಧಾರದಲ್ಲಿ ರಶ್ಯ ಸೇನೆ ಸೇರ್ಪಡೆಯಾಗಿರುವ ಭಾರತೀಯರ ಕುರಿತು ರಶ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯದ ಸಮನ್ವಯಕಾರರೊಂದಿಗೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ಈ ವಿಷಯವನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಉನ್ನತ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಲಿದ್ದಾರೆ” ಎಂದು ಮಿಸ್ರಿ ಹೇಳಿದ್ದಾರೆ.
ರಶ್ಯದ ಕಝನ್ ನಗರದಲ್ಲಿ ಆಯೋಜನೆಗೊಂಡಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಶ್ಯಗೆ ತೆರಳುವುದಕ್ಕೂ ಒಂದು ದಿನ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರ ರಶ್ಯ ಭೇಟಿ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಧ್ಯಮಗಳಿಗೆ ಸಂಕ್ಷಿಪ್ತ ವಿವರಣೆ ನೀಡಿದರು.
ಬ್ರಿಕ್ಸ್ ವಿಶ್ವದ ಪ್ರವರ್ಧಮಾನ ಆರ್ಥಿಕತೆಗಳನ್ನು ಹೊಂದಿರುವ ಬಹುಪಕ್ಷೀಯ ಗುಂಪಾಗಿದೆ.