ಇಂಡಿಯನ್ವೆಲ್ಸ್ ಮಾಸ್ಟರ್ಸ್ | 3ನೇ ಸುತ್ತಿನಲ್ಲಿ ಜೊಕೊವಿಕ್ ಗೆ ಸೋಲು
ನೊವಾಕ್ ಜೊಕೊವಿಕ್ | Photo:PTI
ಇಂಡಿಯನ್ವೆಲ್ಸ್: ಐದು ಬಾರಿಯ ಚಾಂಪಿಯನ್ ಹಾಗೂ ವಿಶ್ವದ ನಂಬರ್ ವನ್ ನೊವಾಕ್ ಜೊಕೊವಿಕ್ ಸೋಮವಾರ ಇಂಡಿಯನ್ವೆಲ್ಸ್ ಮಾಸ್ಟರ್ಸ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅವರನ್ನು ಮೂರನೇ ಸುತ್ತಿನಲ್ಲಿ ಇಟಲಿಯ 123ನೇ ವಿಶ್ವ ರ್ಯಾಂಕಿಂಗ್ ನ ಲೂಕ ನಾರ್ಡಿ 6-4. 3-6. 6-3 ಸೆಟ್ಗಳಿಂದ ಸೋಲಿಸಿದರು.
20 ವರ್ಷದ ನಾರ್ಡಿ, ಈ ಪಂದ್ಯಾವಳಿಯ ಅಂತಿಮ ಅರ್ಹತಾ ಸುತ್ತಿನಲ್ಲಿ ಡೇವಿಡ್ ಗೋಫಿನ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಆದರೆ, ಅರ್ಜೆಂಟೀನದ 30ನೇ ವಿಶ್ವ ರ್ಯಾಂಕಿಂಗ್ ನ ತೋಮಸ್ ಮಾರ್ಟಿನ್ ಎಚವೆರಿ ಪಂದ್ಯಾವಳಿಯಿಂದ ಹಿಂದೆ ಸರಿದ ಬಳಿಕ ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿದ್ದರು.
ನಾರ್ಡಿಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿತ್ತು. ಎರಡನೇ ಸುತ್ತಿನಲ್ಲಿ ಅವರು ಚೀನಾದ ಝಿಝೆನ್ ಝಾಂಗ್ರನ್ನು 6-3, 3-6, 6-3 ಸೆಟ್ಗಳಿಂದ ಮಣಿಸಿದ್ದರು.
ಸೋಮವಾರ ನಾರ್ಡಿ ತನ್ನ ಎದುರಾಳಿಯನ್ನು ಎರಡು ಗಂಟೆ 20 ನಿಮಿಷಗಳ ಅವಧಿಯಲ್ಲಿ ಸೋಲಿಸಿದರು.
‘‘ಈ ರಾತ್ರಿಗಿಂತ ಮೊದಲು ನನ್ನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಈ ವಿಜಯದಿಂದ ನನಗೆ ಅತೀವ ಸಂತೋಷವಾಗಿದೆ’’ ಎಂದು ಪಂದ್ಯದ ಬಳಿಕ ಮಾತನಾಡಿದ ಅವರು ಹೇಳಿದರು.
ಮಾಸ್ಟರ್ಸ್ ಹಂತದ ಪಂದ್ಯಾವಳಿಯಲ್ಲಿ, 1990ರ ಬಳಿಕ ಅಗ್ರ 100ರ ಪಟ್ಟಿಯಿಂದ ಹೊರಗಿರುವ ಆಟಗಾರನೊಬ್ಬ ವಿಶ್ವದ ನಂಬರ್ ವನ್ ಆಟಗಾರನನ್ನು ಸೋಲಿಸಿದ ಆರನೇ ಘಟನೆ ಇದಾಗಿದೆ.