'ಭಾರತದ ಪುತ್ರಿಯರು ಸೋತಿದ್ದಾರೆ': ಬ್ರಿಜ್ ಭೂಷಣ್ ಪುತ್ರನ ಸ್ಪರ್ಧೆ ಬಗ್ಗೆ ಕುಸ್ತಿಪಟುಗಳ ಆಕ್ರೋಶ
ಸಾಕ್ಷಿ ಮಲಿಕ್ Photo: PTI
ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಣ್ ಶರಣ್ ಸಿಂಗ್ ಅವರ ಕಿರಿಯ ಪುತ್ರನನ್ನು ಉತ್ತರ ಪ್ರದೇಶದ ಕೇಸರ್ ಗಂಜ್ ಕ್ಷೇತ್ರದಿಂದ ಕಣಕ್ಕೆ ಇಳಿಸಿರುವ ಬಿಜೆಪಿ ಕ್ರಮವನ್ನು ಕುಸ್ತಿಪಟುಗಳು ಕಟುವಾಗಿ ಟೀಕಿಸಿದ್ದಾರೆ.
ಬ್ರಿಜ್ ಭೂಷಣ್ ಆರು ಬಾರಿ ಗೆಲುವು ಸಾಧಿಸಿದ್ದ ಈ ಕ್ಷೇತ್ರದಿಂದ ಕರಣ್ (33) ಬಿಜೆಪಿ ಅಭ್ಯರ್ಥಿ. ಕಳೆದ ಫೆಬ್ರವರಿಯಲ್ಲಿ ಇವರು ಉತ್ತರಪ್ರದೇಶ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
"ಭಾರತದ ಪುತ್ರಿಯರು ಸೋತಿದ್ದಾರೆ. ಬ್ರಿಜ್ ಭೂಷಣ್ ಗೆದ್ದಿದ್ದಾರೆ" ಎಂದು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿಮಲಿಕ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. "ನಾವೆಲ್ಲರೂ ನಮ್ಮ ವೃತ್ತಿಯನ್ನು ಪಣಕ್ಕಿಟ್ಟು ಹಲವು ದಿನಗಳನ್ನು ಬೀದಿಯಲ್ಲಿ ಕಳೆದೆವು. ಇಷ್ಟಾಗಿಯೂ ಬ್ರಿಜ್ ಭೂಷಣ್ ಅವರನ್ನು ಬಂಧಿಸಿಲ್ಲ. ನಾವೆಲ್ಲರೂ ನ್ಯಾಯಕ್ಕಾಗಿ ಆಗ್ರಹಿಸಿದೆವು. ಬಂಧನ ಬಿಡಿ, ಅವರ ಮಗ ಟಿಕೆಟ್ ಪಡೆಯುವ ಮೂಲಕ ಭಾರತದ ಕೋಟ್ಯಂತರ ಪುತ್ರಿಯರ ಭಾವನೆಗಳಿಗೆ ಘಾಸಿಗೊಳಿಸಿದ್ದಾರೆ. ಕುಟುಂಬಕ್ಕೇ ಟಿಕೆಟ್ ದಕ್ಕಿದೆ. ಒಬ್ಬ ವ್ಯಕ್ತಿಯ ಎದುರು ಸರ್ಕಾರ ಏಕೆ ಇಷ್ಟು ದುರ್ಬಲವಾಗಿದೆ?" ಎಂದು ಮಲಿಕ್ ಪ್ರಶ್ನಿಸಿದ್ದಾರೆ.
ಬ್ರಿಜ್ ಭೂಷಣ್ ಸಹಚರ ಸಂಜಯ್ ಸಿಂಗ್ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣ ಸಾಕ್ಷಿ ಈ ಕ್ರೀಡೆಗೆ ವಿದಾಯ ಹೇಳಿದ್ದರು.
"ನಮಗೆ ತೀವ್ರ ಅಸಮಾಧಾನ ಮತ್ತು ಆಘಾತವಾಗಿದೆ. ಕುಸ್ತಿಪಟುಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಕರಣ್ ಅವರಿಗೆ ಈ ಸ್ಥಾನ ನೀಡುವ ಮೂಲಕ ನಮ್ಮ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ" ಎಂದು ಮಲಿಕ್ ತಾಯಿ ಸುದೇಶ್ ಪ್ರತಿಕ್ರಿಯಿಸಿದ್ದಾರೆ.