ಕಾರ್ಯಾಚರಣೆ ದಾಖಲೀಕರಣದಲ್ಲಿ ಲೋಪ: ಇಂಡಿಗೋ ಗೆ 30 ಲಕ್ಷ ರೂ. ದಂಡ
ಹೊಸದಿಲ್ಲಿ: ಇಂಡಿಗೋ ವಿಮಾನಗಳ ಕಾರ್ಯಾಚರಣೆ, ತರಬೇತಿ ಮತ್ತು ಎಂಜಿನಿಯರಿಂಗ್ ವಿಧಿವಿಧಾನಗಳಿಗೆ ಸಂಬಂಧಿಸಿದ ದಾಖಲೀಕರಣದಲ್ಲಿ ನಿರ್ದಿಷ್ಟ ವ್ಯವಸ್ಥಿತ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ ಸಂಸ್ಥೆಯ ಎ321 ವಿಮಾನಗಳಲ್ಲಿ ನಾಲ್ಕು ಟೈಲ್ ಸ್ಟ್ರೈಕ್ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಶೇಷ ಪರಿಶೋಧನೆಯನ್ನು ಜೂನ್‍ನಲ್ಲಿ ಆರಂಭಿಸಿದ್ದರು.
ಈ ಬಗ್ಗೆ ಹೇಳಿಕೆ ನೀಡಿರುವ ಇಂಡಿಗೊ ಸಂಸ್ಥೆ, ಡಿಜಿಸಿಎ ಆದೇಶವನ್ನು ಪರಿಶೀಲಿಸಲಾಗುತ್ತಿದೆ. ಸೂಕ್ತ ವೇಳೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ಹೇಳಿದೆ.
ಪರಿಶೋಧನೆಯ ವೇಳೆ ವಿಮಾನ ಕಾರ್ಯಾಚರಣೆ, ತರಬೇತಿ ಎಂಜಿನಿಯರಿಂಗ್ ಹಾಗೂ ಎಫ್‍ಡಿಎಂ ಕಾರ್ಯಕ್ರಮಗಳ ದಾಖಲೀಕರಣ ಮತ್ತು ವಿಧಿವಿಧಾನಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಎಫ್‍ಡಿಎಂ ಎನ್ನುವುದು ವಿಮಾನದ ಡಾಟಾ ನಿಗಾ ವ್ಯವಸ್ಥೆಯಾಗಿದೆ.
ಈ ಲೋಪಗಳ ಬಗ್ಗೆ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿದ್ದು, ವಿಮಾನಯಾನ ಸಂಸ್ಥೆ ನೀಡಿದ ಉತ್ತರವನ್ನು ವಿವಿಧ ಹಂತಗಳಲ್ಲಿ ವಿಮರ್ಶಿಸಲಾಗಿದೆ ಹಾಗೂ ಇದು ಸಮಾಧಾನಕರವಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.